ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ‘ರೋಹಿತ್ ಕಾಯ್ದೆ ಜಾರಿ’ಗೆ ಒಕ್ಕೊರಲ ಆಗ್ರಹ

ಬೆಂಗಳೂರು : ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ವಿರುದ್ಧ ಕಾನೂನಿನ ಅವಶ್ಯ. ಅ ಹಿನ್ನೆಲೆಯಲ್ಲಿ ಸಮಾನ ಹಾಗೂ ಒಳಗೊಳ್ಳುವ ಶಿಕ್ಷಣಕ್ಕಾಗಿ ದೇಶಾದ್ಯಂತ ‘ರೋಹಿತ್ ಕಾಯ್ದೆ’ಯನ್ನು ಜಾರಿ ಮಾಡಬೇಕು’ ಎಂದು ‘ರೋಹಿತ್ ಕಾಯಿದೆ’ಗಾಗಿ ಜನಾಂದೋಲನ ಸಂಘಟನೆ ಆಗ್ರಹಿಸಿದೆ.
ರವಿವಾರ ನಗರದ ಸೈಂಟ್ ಜೋಸೆಫ್ ಕಾನೂನು ಕಾಲೇಜಿನಲ್ಲಿ ರೋಹಿತ್ ಕಾಯ್ದೆಗಾಗಿ ಜನಾಂದೋಲನದ ವತಿಯಿಂದ ಉನ್ನತ ಶಿಕ್ಷಣದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜಾತಿ ದೌರ್ಜನ್ಯ ಕುರಿತು ರೋಹಿತ್ ಕಾಯ್ದೆ ಜಾರಿಗಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಲೇಖಕ ವಿಕಾಸ್ ಮೌರ್ಯ, ‘ಒಂದು ಸಮುದಾಯದಿಂದ ಮಾತ್ರ ಕಾಯ್ದೆ ಜಾರಿ ಮಾಡಿಸಲು ಸಾಧ್ಯವಿಲ್ಲ. ಜೈ ಭೀಮ್ ಲಾಲ್ ಸಲಾಮ್‍ಗಳು ಒಂದಾಗಿ ಜನಾಂದೋಲನ ರೂಪಿಸಬೇಕು’ ಎಂದು ಕರೆ ನೀಡಿದರು.
‘ಸಮಾಜ ಹೇಗಿದಿಯೋ, ಆ ಸಮಾಜದ ಪ್ರತಿಬಿಂಬವಾಗಿಯೇ ಇಲ್ಲಿನ ಸಂಸ್ಥೆಗಳು, ಕಾಲೇಜುಗಳು, ಶಾಲೆಗಳು, ಸಂಘಟನೆಗಳು, ಕುಟುಂಬಗಳು ಇರುತ್ತವೆ. ಇವೆಲ್ಲವೂ ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡುತ್ತಿರುತ್ತವೆ. ಉನ್ನತ ಶಿಕ್ಷಣ ಸಂಸ್ಥೆಗಳೂ ಇದರ ಹೊರತಾಗೇನು ಇಲ್ಲ. ಅವು ಈ ನೆಲದ ಬುಡ ಆಗಿರುವ ಅನಿಷ್ಠ ಜಾತಿ ಪದ್ಧತಿಗಳನ್ನು ಮೈ ತುಂಬಿಕೊಂಡೆ ಮುಂದುವರೆಯುತ್ತಿರುತ್ತವೆ’ ಎಂದು ಅವರು ಹೇಳಿದರು.
‘ತೋರಟ್ ಸಮಿತಿ ಪ್ರಕಾರ ಶೇ.72ರಷ್ಟು ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ನಮ್ಮ ಮೇಲೆ ಜಾತಿ ತಾರತಮ್ಯವಾಗುತ್ತಿದೆ ಎಂದು ಹೇಳುತ್ತಾರೆ. ಮಾತ್ರವಲ್ಲದೆ, ಸಂದರ್ಶನಗಳಲ್ಲಿ ಶೇ.85ರಷ್ಟು ಮಕ್ಕಳಿಗೆ ಮಾರ್ಗದರ್ಶಕರು ಸಮಯವೇ ಕೊಡುವುದಿಲ್ಲ. ‘ವೈವಾ’ಗಳಲ್ಲಿ ಶೇ.45ರಷ್ಟು ಕಷ್ಟಕರವಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಳಸಮುದಾಯದ ಯುವಕ-ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆದುಕೊಳ್ಳಬಾರದು ಎನ್ನುವ ಹುನ್ನಾರವನ್ನು ಮೇಲ್ಜಾತಿಯವರು ಮಾಡುತ್ತಿದ್ದಾರೆ ಎಂದು ವಿಕಾಸ್ ಮೌರ್ಯ ದೂರಿದರು.
2014ರಿಂದ 2021ರ ತನಕ 122 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಂಸತ್ತಿನಲ್ಲಿ ಹೇಳುತ್ತಾರೆ. ಅದಕ್ಕೆ ಪರಿಹಾರ ಏನು ಕೊಡುತ್ತಿದ್ದೇವೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಕ್ಯಾಂಪಸ್‍ಗಳಲ್ಲಿ ಎಸ್‍ಸಿ-ಎಸ್‍ಟಿ ಘಟಕ ಏನು ಮಾಡುತ್ತಿವೆ? ಯಾವ ಕಾರಣಕ್ಕಾಗಿ ನೀವು ಸಂಸದರಾಗಿ ಆಯ್ಕೆ ಆಗಿ ಹೋಗಿದ್ದೀರಿ ಎಂದು ನಾಚಿಕೆ ಆಗಬೇಕು. ಬ್ರಾಹ್ಮಣ ಮತ್ತು ಬನಿಯಾ ಯಜಮಾನಿಕೆಯನ್ನು ಕಾಪಾಡಲು ಮತ್ತು ಬಂಡವಾಳಶಾಹಿಗಳನ್ನು ಕಾಪಾಡುವುದಕ್ಕೆ ಸಂಸತ್ತಿಗೆ ಹೋಗಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ 18-37ವರ್ಷದ ಶೇ.37ರಷ್ಟು ಯುವಕ, ಯುವತಿಯರು ಕಾಲೇಜುಗಳಿಂದ ಹೊರಗುಳಿಯುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಅತಿ ಕಡಿಮೆ ಯುವಕ ಯುವತಿಯರು ಹೋಗುತ್ತಿದ್ದಾರೆ. ಅವರನ್ನೂ ಕೂಡ ಶಿಕ್ಷಣವನ್ನು ಪಡೆಯಲಾಗದ ಸ್ಥತಿಗೆ ತಳ್ಳಲಾಗುತ್ತಿದೆ. ಜಾತಿ ಪದ್ಧತಿ ಎನ್ನುವುದು ಈ ನೆಲದ ಗುಣವಾಗಿದೆ. ಈ ಜಾತಿ ಪದ್ಧತಿ ಅಳಿಸಿ ಹಾಕದ ಹೊರತು ಜಾತಿ ದೌರ್ಜನ್ಯಗಳು ನಿಲ್ಲುವುದಿಲ್ಲ. ಆದ್ದರಿಂದಲೇ ರೋಹಿತ್ ಕಾಯ್ದೆಯನ್ನು ಜಾರಿ ಮಾಡಬೇಕು ವಿಕಾಸ್‍ಮೌರ್ಯ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರಾಧಿಕಾ ವೇಮುಲ (ರೋಹಿತ್ ವೇಮುಲಾ ತಾಯಿ), ಪ್ರಶಾಂತ್ (ರೋಹಿತ್ ಸ್ನೇಹಿತ), ದಸಂಸ ಮುಖಂಡ ಮಾವಳ್ಳಿ ಶಂಕರ್, ವಿದ್ಯಾರ್ಥಿ ನಾಯಕಿ ಲೇಖಾ, ವಕೀಲ ವಿನಯ್ ಶ್ರೀನಿವಾಸ್, ಪ್ರಾಧ್ಯಾಪಕ ಡಾ.ಹುಲಿಕುಂಟೆ ಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ದಲಿತರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆನ್ನುವ ಕಾರಣಕ್ಕೆ ವಿವಿಗಳಲ್ಲಿ ವಿದ್ಯಾರ್ಥಿ ವೇತನಗಳನ್ನು ನಿಲ್ಲಿಸುತ್ತಾರೆ. ಹಾಸ್ಟೆಲ್‍ಗಳಲ್ಲಿ ಕೊಠಡಿಗಳನ್ನು ಕೊಡುವುದಿರುವುದು ಸೇರಿದಂತೆ ಇನ್ನಿತರೆ ಕಿರುಕಳಗಳನ್ನೂ ಕೊಡುತ್ತಾರೆ. ಇವೆಲ್ಲವನ್ನೂ ಬುದ್ಧಿವಂತಿಕೆಯಿಂದ ಮೆಟ್ಟಿ ನಿಂತು, ವಿದ್ಯಾಭ್ಯಾಸ ಪಡೆದುಕೊಳ್ಳಬೇಕು. ದಲಿತರು ಶಿಕ್ಷಣದಿಂದ ಮಾತ್ರ ಎಲ್ಲ ದೌರ್ಜನ್ಯಗಳಿಂದ ಹೊರಬರಲು ಸಾಧ್ಯ. ದೇಶದಲ್ಲಿ ಮೇಲ್ಜಾತಿಯವರು ಶೇ.24ರಷ್ಟೂ ಇಲ್ಲ. ಆದರೆ ಅವರು ಎಸ್‍ಸಿ-ಎಸ್‍ಟಿ ಅಲ್ಪಸಂಖ್ಯಾತರು, ಹಿಂದುಳಿದವರ್ಗದವರೆಲ್ಲರನ್ನೂ ಆಳ್ವಿಕೆ ಮಾಡುತ್ತಿದ್ದಾರೆ. ಕಾರಣ ಅವರಿಗೆ ಶಿಕ್ಷಣ ಇರುವುದರಿಂದ. ಆದ್ದರಿಂದ ದಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಂಡು ಜ್ಞಾನವಂತರಾಗಬೇಕು. ರೋಹಿತ್‍ಗೆ ಆಗಿದ ಅನ್ಯಾಯ ಇಂದು ಯಾವ ದಲಿತ ವಿದ್ಯಾರ್ಥಿಗೂ ಆಗಬಾರದು. ದೇಶದಲ್ಲಿ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಮಕ್ಕಳೆಲ್ಲರೂ ನನ್ನ ಮಗ ರೋಹಿತ್ ಇದ್ದ ಹಾಗೆ. ಅವರೆಲ್ಲರೂ ನನ್ನ ಮಕ್ಕಳು. ನನ್ನ ಮಕ್ಕಳಿಗಾಗಿ ನಾನು ಹೋರಾಟ ಮಾಡುತ್ತೇನೆ’
-ರಾಧಿಕಾ ವೇಮುಲಾ, ರೋಹಿತ್ ವೇಮುಲಾ ತಾಯಿ
‘ಬಿಜೆಪಿ ಸರಕಾರದ ಕೋಮುವಾದಿ ಅಜೆಂಡಾದ ಫಲವಾಗಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ನಾಶವಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಮೂಢನಂಬಿಕೆಗಳ ವಿರುದ್ಧ ಕರಡು ಕಾಯ್ದೆ ತಂದಿದ್ದರು. ಆದರೆ ಅದು ಕಾನೂನಾಗಲಿಲ್ಲ. ಅದೇ ರೀತಿ ಡಾ.ಸಿದ್ಧಲಿಂಗಯ್ಯ ಅಂತರ್ಜಾತಿ ವಿವಾಹವಾದ ದಂಪತಿಯ ಮಕ್ಕಳಿಗೆ ಮೀಸಲಾತಿ ತರಬೇಕೆಂದು ಒತ್ತಾಯಿಸಿದ್ದರು, ಅದು ಜಾರಿಯಾಗಲಿಲ್ಲ. ಸರಕಾರಿ ಶಾಲೆಗಳಲ್ಲಿ ದಲಿತ ಮಹಿಳೆಯರು ಮಾಡುವ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳು ನಿರಾಕರಿಸುವಂತೆ ಈ ಜಾತಿ ವ್ಯವಸ್ಥೆಯು ಅವರಿಗೆ ಹೇಳಿಕೊಡುತ್ತದೆ. ಜಾತಿವಾದವು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಷ್ಟು ವ್ಯಾಪಕವಾಗಿದ್ದರೆ, ಇದರ ವಿರುದ್ಧ ಹೋರಾಡಲು ರೋಹಿತ್ ಕಾಯ್ದೆಯಂತಹ ವಿಶೇಷ ಕಾನೂನಿನ ಅಗತ್ಯವಿದೆ’
-ಮಾವಳ್ಳಿ ಶಂಕರ್ ದಸಂಸ ಮುಖಂಡ







