ಕೆಎಸ್‍ಪಿಸಿಬಿ ಫೇಸ್ ಲೆಸ್ ಪೋರ್ಟಲ್‍ಗೆ ಚಾಲನೆ
ಪರಿಸರ ಉಳಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮ : ಈಶ್ವರ್ ಖಂಡ್ರೆ

ಬೆಂಗಳೂರು : ಜೀವವೂ ಮುಖ್ಯ ಜೀವನೋಪಾಯವೂ ಮುಖ್ಯ, ಅದೇ ರೀತಿ ಪ್ರಕೃತಿ, ಪರಿಸರ ಉಳಿಯಬೇಕು, ರಾಜ್ಯದ ಅಭಿವೃದ್ಧಿ ಆಗಬೇಕು ಈ ನಿಟ್ಟಿನಲ್ಲಿ ಪರಿಸರ ಇಲಾಖೆ ಶ್ರಮಿಸಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುಗಮ ವ್ಯಾಪಾರ ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ತರುವ ಮುಖಾಮುಖಿ ರಹಿತ (ಫೇಸ್ ಲೆಸ್) ಪೋರ್ಟಲ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಂಡಳಿಯ ಸೇವೆಗಳನ್ನು ಉದ್ಯಮ ಮತ್ತು ಪರಿಸರ ಸ್ನೇಹಿ ಮಾಡುವುದು ಈ ಫೇಸ್‍ಲೆಸ್ ಸೇವೆಯ ಉದ್ದೇಶವಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಕಾಯ್ದೆ-1974 ಮತ್ತು ವಾಯು ಕಾಯ್ದೆ-1981 ರಡಿಯಲ್ಲಿ ನೀಡುವ ಸಮ್ಮತಿ ಪತ್ರಗಳ ಮತ್ತು ಪರಿಸರ ಕಾಯ್ದೆ-1986ರ ವಿವಿಧ ನಿಯಮಗಳಡಿಯಲ್ಲಿ ನೀಡುವ ಅಧಿಕಾರ ಪತ್ರಗಳನ್ನು ಪ್ರಸ್ತುತ ಎನ್.ಐ.ಸಿ. ಅಭಿವೃದ್ಧಿ ಪಡಿಸಿರುವ ಎಕ್ಸ್ ಜಿಎನ್(ಎಕ್ಸ್ ಟೆಂಡೆಡ್ ಗ್ರೀನ್ ನೋಡ್) ತಂತ್ರಾಂಶದ ಮೂಲಕ ನೀಡಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಅಲ್ಲದೆ, ಸರಕಾರದ ‘ವ್ಯವಹಾರ ಸುಧಾರಣಾ ಕ್ರಿಯಾ ಯೋಜನೆ (ಇ.ಒ.ಡಿ.ಬಿ ಕಾಯಾರ್ಂಶ)’ ಯನ್ನು ಮಂಡಳಿಯು ಈಗಾಗಲೇ ಅನುಷ್ಟಾನಗೊಳಿಸಿದೆ. ಇದು ಸುಗಮ ವ್ಯಾಪಾರಕ್ಕೆ ಉತ್ತೇಜನ ನೀಡಲಿದೆ. ಇದರ ಜೊತೆಗೆ ಉದ್ದಿಮೆಗಳಿಗೆ ಮಂಡಳಿಯು ನೀಡುತ್ತಿರುವ ವಿವಿಧ ಸೇವೆಗಳನ್ನು ಮತ್ತಷ್ಟು ಸುಲಲಿತವಾಗಿ ನೀಡುವ ನಿಟ್ಟಿನಲ್ಲಿ ಮಂಡಳಿಯಿಂದ ನೀಡಲಾಗುತ್ತಿರುವ ಸಮ್ಮತಿ ಹಾಗೂ ಅಧಿಕಾರ ಪತ್ರಗಳನ್ನು ಒಂದೇ ಸೂರಿನಡಿ ಫೇಸ್‍ಲೆಸ್ ಮಾದರಿಯಲ್ಲಿ ನೀಡಲು ಸರಳವಾದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು
ಬೆಂಗಳೂರಿನ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಇನ್‍ಫಾರ್‍ಮೇಷನ್ ಟೆಕ್ನಾಲಜಿ-ಐಐಐಟಿಬಿ ಯ ನಿರ್ದೇಶಕ ದೇಬಬ್ರತ ದಾಸ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಂತ್ರಜ್ಞರ ಸಮಿತಿಯಲ್ಲಿದ್ದ ರಾಜ್ಯ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ, ಡಿಪಿಎಆರ್ (ಇ-ಆಡಳಿತ) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೂಲಂಕಷವಾಗಿ ಚರ್ಚಿಸಿ ಈ ಪೋರ್ಟಲ್ ಸಿದ್ಧಪಡಿಸಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಸದರಿ ಸಮಿತಿಯು ಹಲವಾರು ಸಭೆ ನಡೆಸಿ, ಪ್ರಸ್ತುತ ಚಾಲ್ತಿಯಲ್ಲಿರುವ ಅರ್ಜಿಗಳ ವಿಲೇವಾರಿ ಕಾರ್ಯ ವಿಧಾನವನ್ನು ಸುದೀರ್ಘವಾಗಿ ಚರ್ಚಿಸಿದ ನಂತರ ಮುಖಾಮುಖಿ ರಹಿತ ಮಾದರಿಯ ಮೊದಲ ಹೆಜ್ಜೆಯಾಗಿ ಈಗಾಗಲೇ ಮಂಡಳಿಯಲ್ಲಿ ಚಾಲ್ತಿಯಲ್ಲಿರುವ ಎಕ್ಸ್ ಜಿಎನ್ ತಂತ್ರಾಂಶದಲ್ಲಿ ಈ ಹೊಸ ತಂತ್ರಾಂಶವನ್ನು ಎನ್.ಐ.ಸಿ. ಮುಖಾಂತರ ಅಭಿವೃದ್ಧಿಪಡಿಸಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಈ ಪೋರ್ಟಲ್‍ನಿಂದ ಮಂಡಳಿಯಲ್ಲಿ ಸ್ವೀಕೃತಿಯಾಗುವ ಅರ್ಜಿಗಳನ್ನು ತ್ವರಿತ, ಪಾರದರ್ಶಕವಾಗಿ, ಆದ್ಯತೆ ಮೇರೆಗೆ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಎಕ್ಸ್ ಜಿಎನ್ ತಂತ್ರಾಂಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಅರ್ಜಿದಾರರು ಮಂಡಳಿಯನ್ನು ಸಂಪರ್ಕಿಸದೆ ಆನ್‍ಲೈನ್ ಮುಖಾಂತರ ನೇರವಾಗಿ ಸಮ್ಮತಿ ಪತ್ರ/ಅಧಿಕಾರ ಪತ್ರಗಳನ್ನು ಪಡೆಯಬಹುದಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂಪರ್ವೇಜ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಐಐಐಟಿಬಿಯ ನಿರ್ದೇಶಕ ದೇಬಬ್ರತ ದಾಸ್ ಮತ್ತಿತರರು ಪಾಲ್ಗೊಂಡಿದ್ದರು.







