ಅಮಿತ್ ಶಾ ಕ್ಷಮೆ ಕೇಳದಿದ್ದರೆ ಬಿಜೆಪಿ ಕಚೇರಿ ಬಂದ್ ಮಾಡಿಸಬೇಕು : ಜ್ಞಾನಪ್ರಕಾಶ್ ಸ್ವಾಮೀಜಿ
ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ ಧರಣಿ

ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್‍ನಲ್ಲಿ ‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ದ ವತಿಯಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ‘ಸ್ವಾಭಿಮಾನ ಮತ್ತು ಘನತೆಯ ಬದುಕು ಕಟ್ಟಿಕೊಳ್ಳಲಾಗದಿದ್ದರೆ, ತಾಯಿ ಹೊಟ್ಟೆಯಲ್ಲೇ ಸಾಯಬೇಕು’ ಎಂದು ಡಾ.ಅಂಬೇಡ್ಕರ್ ಹೇಳಿದ್ದರು. ಮೋಸ ಎಂದರೆ ಮೋದಿ ಮತ್ತು ಅಮಿತ್ ಶಾ. ಈಗ ನಮ್ಮ ದೇಶ ಅವರ ಕೈಯಲ್ಲಿ ಸಿಕ್ಕಿದೆ. ಶೋಷಿತರು ಮತ್ತು ಎಸ್‍ಸಿ-ಎಸ್‍ಟಿ ವರ್ಗದ ಜನರು ಯವಾಗಲೂ ಬೀದಿಯಲ್ಲೇ ಇರಬೇಕು ಎಂದು ‘ಬಂಚ್ ಆಫ್ ಥಾಟ್ಸ್’ ಕೃತಿಯಲ್ಲಿ ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗಣರಾಜ್ಯೋತ್ಸವದೊಳಗೆ ಅಮಿತ್ ಶಾ ಕ್ಷಮೆ ಕೇಳದಿದ್ದರೆ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪಕ್ಷದ ಕಚೇರಿಗೆ ಚಪ್ಪಲಿ ಹಾರ ಹಾಕಿ, ಕಚೇರಿ ಬಾಗಿಲು ತೆಗೆಯದಂತೆ ಬಂದ್ ಮಾಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಎಲ್ಲರೂ ಒಗ್ಗಟ್ಟಾಗಬೇಕು. 70ರ ದಶಕದಲ್ಲಿ ದಲಿತ ನಾಯಕರು ಎದ್ದು ನಿಂತರೆ ವಿಧಾನಸೌಧ ನಡುಗುತ್ತಿತ್ತು. ಇದೀಗ ನಿಂತುಕೊಳ್ಳಲು ಮಂಡಿಯಲ್ಲಿ ಶಕ್ತಿಯಿಲ್ಲವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ನಮಗೆ ವಿಷ ಹಾಕುತ್ತವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ದೇವರನ್ನು ಪೂಜಿಸಿ ಸ್ವರ್ಗಕ್ಕೆ ಹೋಗುತ್ತೇನೆ ಎಂದವರಿಗೆ 12 ಜತೆ ಎಕಡದಲ್ಲಿ ಹೊಡೆಯಬೇಕು ಎಂದು 12ನೇ ಶತಮಾನದ ವಚನದಲ್ಲಿ ಹೇಳಲಾಗಿದೆ. ಇವತ್ತು ಅಮಿತ್ ಶಾ ಅವರಿಗೆ ಏನು ಮಾಡಬೇಕು ಎಂದು ಜ್ಞಾನಪ್ರಕಾಶ್ ಸ್ವಾಮಿಜಿ ಪ್ರಶ್ನಿಸಿದರು.
ಹಿರಿಯ ಹೋರಾಟಗಾರ ಬಿ.ಗೋಪಾಲ್ ಮಾತನಾಡಿ, ‘ದಿಲ್ಲಿಯಲ್ಲಿರುವ ಅಮಿತ್ ಶಾ, ಪ್ರಧಾನಿ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‍ರಿಗೆ ಹೇಳುತ್ತೇನೆ. ನಿಮ್ಮ ವಂಶಸ್ಥರು, ನಮಗೆ ಕೆರೆಯ ನೀರನ್ನು ಮುಟ್ಟಲು ಬಿಟ್ಟಿಲ್ಲ. ತುಪ್ಪ ತಿನ್ನುವುದು, ಬಂಗಾರವನ್ನು ನಿಷೇಧ ಮಾಡಿದ್ದೀರಿ ಇದೇನಾ ನಿಮ್ಮ ವಂಶಸ್ಥರು ನೀಡಿದ ಸ್ವರ್ಗ? ನಮಗೆ ಸ್ವರ್ಗವನ್ನು ತೋರಿಸಿದವರು ಭಗವಾನ್ ಬುದ್ಧರು’ ಎಂದು ತಿಳಿಸಿದರು.
‘ಮೊಟ್ಟ ಮೊದಲಿಗೆ ಸ್ವರ್ಗದ ಕಿಂಡಿಯನ್ನು ತೋರಿಸಿದವರು ಜ್ಯೋತಿ ಬಾಫುಲೆ ಮತ್ತು ಸಾವಿತ್ರಿ ಬಾಫುಲೆ ಅವರು. ಅವರು ದೇಶದಲ್ಲಿ ಹುಟ್ಟಲಿಲ್ಲವೆಂದರೆ ನಾವು ಸೂಟು ಬೂಟು ಹಾಕಲು ಆಗುತ್ತಿರಲಿಲ್ಲ. ಪಾರ್ಲಿಮೆಂಟ್‍ನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರೆ, ಪಾರ್ಲಿಮೆಂಟ್‍ಗೂ ಅವಮಾನ ಜತೆಗೆ 140 ಕೋಟಿ ಜನರಿಗೂ ಅವಮಾನ’ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದು ನಿಜವಾದ ಸ್ವರ್ಗವನ್ನು ತೋರಿಸಿದರು. ಅಮಿತ್ ಶಾ ತೋರುವ ಸ್ವರ್ಗ ನಮಗೆ ಬೇಡ. ಅಂಬೇಡ್ಕರ್ ಅವರೇ ನಮ್ಮ ನಾಯಕ, ಅವರೇ ನಮ್ಮ ಮಾರ್ಗದರ್ಶಕ ಎಂದು ಹೇಳಿದರು.
ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ(ಭೀಮಶಕ್ತಿ) ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್, ಕೆಜೆಎಸ್ ಅಧ್ಯಕ್ಷ ಮರಿಯಪ್ಪ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಕೌತಾಳ್, ಸರಕಾರಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ವಿದ್ಯಾರ್ಥಿ ಮುಖಂಡರಾದ ವೇಣು, ಚಂದ್ರು ಪೆರಿಯಾರ್ ಮತ್ತಿತರರು ಉಪಸ್ಥಿತರಿದ್ದರು.







