ಬೆಂಗಳೂರು | ರೈಲಿನಲ್ಲಿ ಸಿಕ್ಕ ನಕಲಿ ನೋಟು ಚಲಾವಣೆಗೆ ಯತ್ನ: ಮೂವರ ಬಂಧನ

ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸುಮನ್ ಹಾಗೂ ಗುಲಾಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸುಮನ್ ಹಾಗೂ ಗುಲಾಲ್ ಎಂಬವರಿಗೆ ಜನವರಿ 28ರಂದು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಾಗ ಒಂದೂವರೆ ಲಕ್ಷ ರೂ. ಮೊತ್ತದ 500 ಮುಖಬೆಲೆಯ ನೋಟುಗಳು ಸಿಕ್ಕಿವೆ.
ಆನಂತರ, ನಗರಕ್ಕೆ ಬಂದು ಹಣವನ್ನು ಊರಿಗೆ ಕಳುಹಿಸಲು ಮುಂದಾಗಿದ್ದರು. ಕುಮಾರ್ ಎಂಬವರ ಬಳಿ 70 ಸಾವಿರ ಹಣ ನೀಡಿ ಖಾತೆಗೆ ವರ್ಗಾಯಿಸುವಂತೆ ಓರ್ವ ಹೇಳಿದ್ದ. ಹಣ ಸ್ವೀಕರಿಸಿ ನೋಟು ಎಣಿಸುವಾಗ ಸೀರಿಯಲ್ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನ ಮೂಡಿ ಪರಿಶೀಲಿಸಿದ್ದು, ಖೋಟಾನೋಟು ಎಂದು ಖಚಿತಪಡಿಸಿಕೊಂಡಿದ್ದರು.
ಈ ಬಗ್ಗೆ ಕುಮಾರ್ ಮಾಹಿತಿ ನೀಡಿದ ಮೇರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





