ಬೆಂಗಳೂರು : ಕಳವು ಆರೋಪ ಹೊತ್ತ ಪುತ್ರನ ಮೃತದೇಹ ಸ್ವೀಕರಿಸದ ಕುಟುಂಬ; ಅಂತ್ಯಕ್ರಿಯೆ ನಡೆಸಿದ ಪೊಲೀಸರು

ಸಾಂದರ್ಭಿಕ ಚಿತ್ರ (credit: X/Grok)
ಬೆಂಗಳೂರು : ಸರಣಿ ಕಳ್ಳತನ ಆರೋಪ ಹೊತ್ತಿದ್ದ ಪುತ್ರನ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ನಿರಾಕರಣೆ ಮಾಡಿದ್ದು, ಆನಂತರ ಪೊಲೀಸರೇ ಅಂತ್ಯಕ್ರಿಯೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ದಿನಸಿ ಮಳಿಗೆಯೊಂದರ ನೆಲಮಹಡಿಯಲ್ಲಿ ಇತ್ತೀಚಿಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಅದು ಕೇರಳದ ಸರಣಿ ಕಳವು ಪ್ರಕರಣದ ಆರೋಪಿ ವಿಷ್ಣು ಪ್ರಶಾಂತ್ ಎಂಬಾತನದ್ದು ಎಂದು ಗುರುತಿಸಲಾಗಿದೆ.
ಶವ ದೊರೆತಿರುವ ಬಗ್ಗೆ ಪೋಷಕರಿಗೆ ತಿಳಿಸಿದರೆ, ಅವರು ಮಗನ ಶವ ಸ್ವೀಕರಿಸಲು ತಿರಸ್ಕರಿಸಿದ್ದಾರೆ. ಹೀಗಾಗಿ, ಪೊಲೀಸರೇ ಅಂತ್ಯಸಂಸ್ಕಾರ ನೇರವೇರಿಸಿದ್ದಾರೆ. ಸದ್ಯ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ, ಈತನ ಹಿನ್ನೆಲೆಯನ್ನು ಕೆದಕಿದಾಗ ಆತ ಕೇರಳ, ತಮಿಳುನಾಡಿನಲ್ಲಿ ಸುಮಾರು 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಕೋಣನಕುಂಟೆಪೊಲೀಸರು ಕಂಡುಕೊಂಡಿದ್ದಾರೆ. ನಗರದ ಮಳಿಗೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೊಕೇಶ್ ಜಗಲಾಸರ್ ತಿಳಿಸಿದ್ದಾರೆ.





