ಉರ್ದು ಬದಿಗೊತ್ತಿ ದೇಶದ ಶಾಸ್ತ್ರೀಯ ಸಂಸ್ಕೃತಿಯನ್ನು ಕಲ್ಪನೆ ಮಾಡಲು ಸಾಧ್ಯವಿಲ್ಲ : ಡಾ.ಅಜಯ್ ಕುಮಾರ್ ಸಿಂಗ್

ಬೆಂಗಳೂರು : ದೇಶದ ಸಂಸ್ಕೃತಿಯಲ್ಲಿ ಉರ್ದು ಭಾಷೆಯ ದೊಡ್ಡ ಕೊಡುಗೆಯಿದೆ. ಉರ್ದು ಭಾಷೆಯನ್ನು ಬದಿಗೊತ್ತಿ ದೇಶದ ಶಾಸ್ತ್ರೀಯ ಸಂಸ್ಕೃತಿಯನ್ನು ಕಲ್ಪನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಣದಲ್ಲಿ ಯುನೈಟೆಡ್ ಕೌನ್ಸಿಲ್ ಫಾರ್ ಎಜುಕೇಷನ್ ಅಂಡ್ ಕಲ್ಚರ್ ಹಾಗೂ ಮೆಹೆಫಿಲ್ ಎ ನಿಸಾ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಉರ್ದು ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉರ್ದು ಯಾವುದೋ ಒಂದು ವರ್ಗದ ಭಾಷೆಯಲ್ಲ. ಇದು ದೇಶದ ಇತರ ಭಾಷೆಗಳ ಪೈಕಿ ಒಂದು ಉತ್ತಮ ಭಾಷೆಯಾಗಿದೆ. ಇದನ್ನು ದೇಶದ ಪ್ರತಿಯೊಬ್ಬ ನಾಗರಿಕರು ನೆನಪಿನಲ್ಲಿಟ್ಟುಕೊಳ್ಳಬೇಕು. ದೇವನಾಗರಿ ಲಿಪಿಯ ಮೂಲಕ ನಾನು ಉರ್ದು ಭಾಷೆಯ ಸಾಹಿತ್ಯವನ್ನು ಓದಿದ್ದೇನೆ. ನಮ್ಮ ಸೌಹಾರ್ದತೆಯ ಪರಂಪರೆಯನ್ನು ಮುನ್ನಡೆಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಇವತ್ತು ಉರ್ದು ದಿನ ಆಯೋಜನೆ ಮಾಡುವ ಮೂಲಕ ಉರ್ದು ಭಾಷೆಯ ಮಹತ್ವವನ್ನು ಎತ್ತಿ ಹಿಡಿದಿದ್ದು ಶ್ಲಾಘನೀಯವಾದದ್ದು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ದೇಶದ ಹಲವೆಡೆ ಉರ್ದು ಭಾಷಿಕರ ಸಂಖ್ಯೆ ಅಪಾರವಾಗಿದೆ. ಕೆಲವೊಂದು ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಉರ್ದು ಭಾಷೆಯನ್ನು ಆಡಳಿತದ ಎರಡನೆ ಭಾಷೆಯ ಸ್ಥಾನಮಾನವನ್ನು ಕೊಟ್ಟಿವೆ. ಉರ್ದು ಭಾಷೆಗೆ ಸಿಗಬೇಕಾದ ಗೌರವ ಲಭಿಸಬೇಕು ಎಂದು ತಿಳಿಸಿದರು.
ಉರ್ದು ಭಾಷೆ ತನ್ನ ಭಾಷಾ ಸಂಪನ್ನತೆ ಮತ್ತು ಮಾತಿನ ಶೈಲಿಯಿಂದ ಜನರನ್ನು ತನ್ನತ್ತ ಆಕರ್ಷಿಸುವ ಶಕ್ತಿಯನ್ನು ಹೊಂದಿದೆ. ಉರ್ದು ಭಾಷೆಯು ಅತ್ಯಂತ ಆಕರ್ಷಕ ಭಾಷೆಯಾಗಿದೆ. ಈ ಭಾಷೆಯ ಸಾಹಿತ್ಯವು ಬಹಳ ಶ್ರೀಮಂತವಾಗಿದೆ ಎಂದು ನಸೀರ್ ಅಹ್ಮದ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಹೆಫಿಲ್ ಎ ನಿಸಾ ಸಂಘಟನೆಯ ಅಧ್ಯಕ್ಷೆ ಡಾ.ಶಾಯಿಸ್ತಾ ಯೂಸುಫ್ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿಗಳಾದ ಏಜಾಝ್ ಅಲಿ ಜೊಹರಿ, ಡಾ.ಅಝ್ಲಾ ನಖ್ವಿ, ಇಕ್ಬಾಲ್ ಅಹ್ಮದ್ ಬೇಗ್, ಪ್ರೊ.ಅಲೋಕ್ ರಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸಬೀಹಾ ಝುಬೇರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಯ ಮಕ್ಕಳು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶನ ಮಾಡಿದರು.
ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಅಝೀಝುಲ್ಲಾ ಬೇಗ್, ಅದೋನಿ ಸಲೀಮ್, ಮೀರ್ ಅನೀಸ್ ಅಹ್ಮದ್, ಡಾ.ಸಲಾವುದ್ದೀನ್, ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎ.ಖಾಲಿದ್, ಅವರಿಗೆ ‘ಉರ್ದು ದೋಸ್ತ್’, ಗುಲ್ಬರ್ಗಾದ ಮುಹಮ್ಮದ್ ಅಝೀಝುದ್ದೀನ್ ಪಟೇಲ್ ಅವರಿಗೆ ‘ಮುಮ್ತಾಝ್ ಶಿರೀನ್’, ಮುಂಬೈನ ಮೀರ್ ಹಾಮಿದ್ ಇಕ್ಬಾಲ್ ಸಿದ್ಧೀಖಿ ಅವರಿಗೆ ‘ಮಹ್ಮೂದ್ ಅಯಾಝ್’ ಹಾಗೂ ಬೀದರ್ ಶಾಹೀನ್ ಕಾಲೇಜಿನ ನಿರ್ದೇಶಕಿ ಶಾಯಿಸ್ತಾ ನಾಝ್ ಅವರಿಗೆ ‘ಉರೂಜೆ ನಿಸಾ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.







