ಬೆಂಗಳೂರು | ಅಂಗಡಿ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ; ಆರೋಪಿಯ ಬಂಧನ

ಬೆಂಗಳೂರು : ಅಂಗಡಿಯೊಂದರಲ್ಲಿ ವಸ್ತುವೊಂದನ್ನು ಖರೀದಿಸಿ ಹಣ ನೀಡದೇ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ ಆರೋಪದಡಿ ಯುವಕನೋರ್ವನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರನಗರದ ನಿವಾಸಿ ಗೌತಮ್ (25) ಬಂಧಿತ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿಗೆ ಇಲ್ಲಿನ ಕೋರಮಂಗಲದ ರಾಜೇಂದ್ರ ನಗರದ 80 ಅಡಿ ರಸ್ತೆಯ ಸಬಾನಾ ಸ್ಟೋರ್ ತೆರಳಿದ್ದ ಆರೋಪಿ, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ ಪಡೆದಿದ್ದ. ಅಂಗಡಿ ಸಿಬ್ಬಂದಿ ನಿಸಾರ್ ಹಣ ಪಾವತಿಸುವಂತೆ ಕೇಳಿದ್ದರು. ಸಿಟ್ಟಿಗೆದ್ದ ಆರೋಪಿ, ನನ್ನ ಬಳಿಯೇ ಹಣ ಕೇಳುತ್ತೀಯಾ? ಎಂದು ಬೆದರಿಸಿ ತೆರಳಿದ್ದ. ಈ ಕುರಿತು ನಿಸಾರ್ ಆಡುಗೋಡಿ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





