ಬೆಂಗಳೂರು | ಕನಿಷ್ಠ 31 ಸಾವಿರ ರೂ. ವೇತನಕ್ಕೆ ಆಗ್ರಹಿಸಿ ಗ್ರಾ.ಪಂಚಾಯಿತಿ ನೌಕರರ ಹೋರಾಟ

ಬೆಂಗಳೂರು : ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರುಗಂಟಿ, ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ಕ್ಲರ್ಕ್, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ನೌಕರರೆಂದು ಘೋಷಿಸಿ ಕನಿಷ್ಠ 31 ಸಾವಿರ ರೂ. ವೇತನ ನಿಗದಿಪಡಿಸಬೇಕು. ಮಧ್ಯಂತರ ಪರಿಹಾರವಾಗಿ ಪ್ರತಿ ತಿಂಗಳು 3 ಸಾವಿರ ರೂ. ನೀಡಬೇಕು ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಆಗ್ರಹಿಸಿದೆ.
ಗುರುವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಮನೆ ಚಲೋ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅಧ್ಯಕ್ಷ ಎಂ.ಬಿ.ನಾಡಗೌಡ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದವರಿಗೆ ಮಾಸಿಕ ಕನಿಷ್ಠ ಆರು ಸಾವಿರ ರೂ. ಪಿಂಚಣಿ ನೀಡಬೇಕು. ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸಗಳನ್ನು ಮಾತ್ರ ನಿಗದಿಗೊಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಪಡಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕರ ಹುದ್ದೆ ಸೃಷ್ಟಿಸಬೇಕು. ಗ್ರೇಡ್-1 ಕಾರ್ಯದರ್ಶಿ ಹುದ್ದೆಗಳಿಗೆ ಶೇ.100ರಷ್ಟು ಸ್ಥಾನಗಳನ್ನು, ಗ್ರೇಡ್-2 ಕಾರ್ಯದರ್ಶಿಗಳಿಗೆ ಶೇ.50ರಷ್ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಶೇ.50ರಷ್ಟು ಸ್ಥಾನಗಳಿಗೆ ಬಡ್ತಿ ನೀಡಬೇಕು. ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ನಾಡಗೌಡ ಒತ್ತಾಯಿಸಿದರು.
ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇ.60ರಷ್ಟು ಸ್ಥಾನಗಳನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ಮೀಸಲಿಡಬೇಕು. ಐಪಿಡಿ ಸಾಲಪ್ಪ ವರದಿಯಂತೆ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡಬೇಕು. ನೌಕರರು ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚವನ್ನು ಭರಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಎಲ್ಲ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.
ಅನ್ಯ ಇಲಾಖೆಯ ಸಿಬ್ಬಂದಿಗಳನ್ನು ಗ್ರಾಮ ಪಂಚಾಯಿತಿ ನೌಕರರಾಗಿ ಪರಿಗಣಿಸಬಾರದು. ಸ್ವಚ್ಛವಾಹಿನಿ ನೌಕರರಿಗೆ ತರಬೇತಿ ಪಡೆದ ಎಲ್ಲರಿಗೂ ಉದ್ಯೋಗ ನೀಡಬೇಕು. ಒಡಂಬಡಿಕೆ ಮತ್ತು ವಾರ್ಷಿಕ ನವೀಕರಣ ರದ್ದು ಪಡಿಸಬೇಕು. 15ನೆ ಹಣಕಾಸಿನಲ್ಲಿ ವೇತನ ಪಾವತಿಸಬೇಕು. ಪ್ರತಿಯೊಂದು ಪಂಚಾಯಿತಿಗೆ ಒಬ್ಬ ಚಾಲಕರನ್ನು ಪರಿಗಣಿಸಿ 15 ಸಾವಿರ ರೂ. ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು ಎಂದು ವರಲಕ್ಷ್ಮೀ ಆಗ್ರಹಿಸಿದರು.
ಹೋರಾಟದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಉಪಾಧ್ಯಕ್ಷರಾದ ಆರ್.ಎಸ್.ಬಸವರಾಜು, ಗೋಪಾಲಕೃಷ್ಣ ಹರಲಹಳ್ಳಿ, ಬಿ.ಐ.ಇಲಗೇರಾ, ಶೋಭಾ ಪಾಂಡ್ರೆ ಸೇರಿದಂತೆ ಹಲವರು ಭಾಗವಹಿಸಿದ್ದರು.







