ಬೆಂಗಳೂರು | 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಧರಣಿ

ಬೆಂಗಳೂರು : ಏಳನೇ ವೇತನ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ, ಪ್ರತಿಯೊಬ್ಬ ಪ್ರಜೆಯ ಹಿತ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಸರಕಾರ ನಿವೃತ್ತ ನೌಕರರಿಗೆ ಕೂಡಲೇ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತ ನೌಕರರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಂ.ಪಿ.ಎಂ ಷಣ್ಮುಖಯ್ಯ ಮಾತನಾಡಿ, 2002ರ ಜುಲೈನಿಂದ 2024ರ ಜುಲೈ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ ಹಾಗೂ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ಕಲ್ಪಿಸಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
30ರಿಂದ 40 ವರ್ಷಗಳ ಕಾಲ ಸರಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದು, ಸರಕಾರ ನಮ್ಮ ನೆರವಿಗೆ ಬರಬೇಕು. ಅನೇಕ ನಿವೃತ್ತ ನೌಕರರು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 17 ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ನೀಡಿದ್ದೇವೆ. ಕಳೆದ ವರ್ಷ ಡಿಸೆಂಬರ್ 4 ರಂದು ಬೆಳಗಾವಿಯ ಸುವರ್ಣ ಸೌಧದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಜಾಗೃತಿ ರಥಯಾತ್ರೆ ನಡೆಸಿದ್ದೇವೆ ಎಂದು ಹೇಳಿದರು.
ಧರಣಿಯಲ್ಲಿ ನಿವೃತ್ತ ನೌಕರರ ವೇದಿಕೆಯ ಮುಖಂಡ ಅಶೋಕ ಎಂ.ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಜಿ. ಬಿಸೇರೊಟ್ಟಿ, ಮಹಾಂತೇಶ ವಿ.ಹಿರೇಮಠ ಮತ್ತಿತರರು ಹಾಜರಿದ್ದರು.







