ಬೆಂಗಳೂರು | ಪರಿಶಿಷ್ಟರಿಗೆ ಮೀಸಲಿಟ್ಟ ಹಣ ʼಗ್ಯಾರಂಟಿʼಗೆ ಬಳಕೆ ನಿಲ್ಲಿಸಲು ಆಗ್ರಹಿಸಿ ಧರಣಿ

ಬೆಂಗಳೂರು : ಎಸ್‍ಸಿಎಸ್‍ಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದನ್ನು ಕೂಡಲೇ ರದ್ದುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಠ ಜಾತಿಗಳ ಒಕ್ಕೂಟ’ದ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಎಸ್‍ಸಿಎಸ್‍ಪಿ, ಟಿಎಸ್‍ಪಿ ಕಾಯ್ದೆಯ ಕಲಂ 7ಡಿಯನ್ನು ರದ್ದುಪಡಿಸಿದಂತೆ 7ಬಿ ಮತ್ತು 7ಸಿಯನ್ನು ತಿದ್ದುಪಡಿ ಮಾಡಿ, ರದ್ದುಪಡಿಸಬೇಕು. ಅನುಚ್ಚೇದ 46ರಂತೆ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಳಸಬೇಕೆಂಬ ಸಂವಿಧಾನದ ಆಶಯವನ್ನು ಜಾರಿಗೊಳಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
2014ರಿಂದ 2025ರ ವರೆಗೆ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯ ಅಡಿಯಲ್ಲಿ ಖರ್ಚಾಗಿರುವ ಹಣಕ್ಕೆ ಮೌಲ್ಯಮಾಪನ ಮಾಡಿ ಅಭಿವೃದ್ಧಿಯ ಕುರಿತು ಶ್ವೇತಪತ್ರ ಹೊರಡಿಸಬೇಕು. ಎಲ್ಲ ಇಲಾಖೆಗಳ ಅಡಿಯಲ್ಲಿ ಬರುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಹಣವನ್ನು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಿಸಿ ಸಮುದಾಯದ ಅಭಿವೃದ್ಧಿ ಯೋಜನೆಗಳಿಗೆ ಹಂಚಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯಡಿಯಲ್ಲಿ ಪರಿಶಿಷ್ಟರ ಅಭಿವೃದ್ಧಿ ಅನುದಾನವನ್ನು ಜನಸಂಖ್ಯೆಗನುಗುಣವಾಗಿ ಮೀಸಲಿಟ್ಟು 101 ಜಾತಿಗಳಿಗೆ ವರ್ಗೀಕರಿಸಿ ಜಾರಿಗೊಳಿಸಬೇಕು. ಯೋಜನೆಯ 30ರಷ್ಟು ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಕ್ಕೆ ಹಾಗೂ ವಸತಿ ಶಿಕ್ಷಣಕ್ಕೆ ಮೀಸಲಿಟ್ಟು ಖರ್ಚು ಮಾಡಬೇಕು ಎಂದು ಧರಣಿನಿರತರು ಕೋರಿದರು.
ಗುತ್ತಿಗೆ ಪೌರಕಾರ್ಮಿಕರು, ಕಸ ಸಂಗ್ರಹಿಸುವವರಿಗೆ ಡಿಪಿಎಸ್ ಅಡಿ ತಂದು ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಗೆ ತಲಾ 1000 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು. ಲಿಡ್ಕರ್ ಮತ್ತು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಕನಿಷ್ಟ 300 ಕೋಟಿ ರೂ.ಅನುದಾನವನ್ನು ಮೀಸಲಿಟ್ಟು ಯೋಜನೆಗಳನ್ನು ಜಾರಿಗೆ ತರಬೇಕು ಒತ್ತಾಯಿಸಿದರು.
ಧರಣಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್, ಹೋರಾಟಗಾರ ಕರಿಯಪ್ಪ ಗುಡಿಮನಿ, ಐಆರ್‌ಎಸ್ ನಿವೃತ್ತ ಅಧಿಕಾರಿ ಭೀಮಾಶಂಕರ್, ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್. ವೆಂಕಟೇಶ್, ಅಂಕಣಕಾರ ಶಿವಸುಂದರ್, ಚಂದ್ರು ತರಹುಣಸೆ ಮತ್ತಿತರರು ಹಾಜರಿದ್ದರು.







