ಎ.26ಕ್ಕೆ ಸಂವಿಧಾನ ಸಂರಕ್ಷಕರ ಸಮಾವೇಶ | 3 ವರ್ಷಗಳಲ್ಲಿ ಲಕ್ಷ ಕಾರ್ಯಕರ್ತರ ಪಡೆ ಸಜ್ಜುಗೊಳಿಸುವ ಗುರಿ : ಎದ್ದೇಳು ಕರ್ನಾಟಕ

ಬೆಂಗಳೂರು : ತಳಮಟ್ಟದಿಂದ ದೇಶಮಟ್ಟದ ತನಕ ಊರು, ಕೇರಿ, ಹಾಡಿ, ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ಈಗಾಗಲೇ ದೇಶಪ್ರೇಮಿಗಳ ತಂಡಗಳನ್ನು ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂದಿನ 3 ವರ್ಷಗಳಲ್ಲಿ 1 ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯಮಟ್ಟದ ಚಾಲನೆ ನೀಡಲು ಎ.26ರಂದು ದಾವಣಗೆರೆಯಲ್ಲಿ ‘ಸಂವಿಧಾನ ಸಂರಕ್ಷಕರ ಸಮಾವೇಶ’ ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕದ ಕೇಂದ್ರ ಸಮಿತಿ ತಿಳಿಸಿದೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ಕೇಂದ್ರ ಸಮಿತಿ ಸದಸ್ಯರಾದ ನೂರ್ ಶ್ರೀಧರ್, ಬಿ.ಟಿ.ಲಲಿತಾ ನಾಯಕ್, ತಾರಾ ರಾವ್, ವೀರಸಂಗಯ್ಯ, ಯೂಸೂಫ್ ಖನ್ನಿ, ಫಾ.ರೆ.ಚಂದ್ರಪ್ರಸಾದ್ ಪಾಲ್ಗೊಂಡಿದ್ದರು.
ತಾರಾ ರಾವ್ ಮಾತನಾಡಿ, ಎದ್ದೇಳು ಕರ್ನಾಟಕ 112 ಸಂಘಟನೆಗಳನ್ನೊಳಗೊಂಡ ನಾಗರಿಕ ವೇದಿಕೆ. 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಇಳಿಸಲು ಪರಿಣಾಮಕಾರಿ ಕೆಲಸ ಮಾಡಿದೆ. ಅವಕಾಶವಾದಿಗಳ ಆಸರೆ ಪಡೆದು ಕೋಮುವಾದಿಗಳೇ ಕೇಂದ್ರದ ಅಧಿಕಾರವನ್ನು ಮತ್ತೆ ಹಿಡಿದುಕೊಂಡಿದ್ದಾರೆ. ಅದಾನಿ, ಅಂಬಾನಿಗಳ ಪರವಾದ ನೀತಿಗಳನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.
ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಜನಹಿತವನ್ನು ಕಾಯಬೇಕಾದರೆ, ದೇಶವನ್ನು ಉಳಿಸಿಕೊಳ್ಳಬೇಕಾದರೆ, ಸಂವಿಧಾನ ಕೊಟ್ಟ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾದರೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ ನಾಗರಿಕ ಶಕ್ತಿ ಬೆಳೆಯಬೇಕಾಗಿದೆ. ದೇಶವನ್ನು ಬಲಾಢ್ಯ ಪಕ್ಷಗಳು ರಕ್ಷಿಸುತ್ತವೆ ಎಂದು ಕಾಯುತ್ತಾ ಕೂರಲು ಸಾಧ್ಯವಿಲ್ಲ. ನಾಗರಿಕರಾದ ನಾವೇ ಒಂದು ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪಗೊಳ್ಳಬೇಕಿದೆ ಎಂದು ಕರೆ ನೀಡಿದರು.
ವೀರಸಂಗಯ್ಯ ಮಾತನಾಡಿ, ಸಮಾವೇಶದಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ನಟ ಪ್ರಕಾಶ್ ರಾಜ್, ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ಚಿಂತಕ ಪರಕಾಲ ಪ್ರಭಾಕರ್, ಮುಸ್ಲಿಮ್ ಸಮುದಾಯದ ರಾಷ್ಟ್ರೀಯ ನಾಯಕ ಮುಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಡಾ.ಸುನೀಲಮ್, ಹೋರಾಟಗಾರ ಸಿದ್ದನಗೌಡ ಪಾಟೀಲ್, ರೈತ ಹೋರಾಟಗಾರರಾದ ಎಚ್.ಆರ್.ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ದಲಿತ ಚಳವಳಿ ಹೋರಾಟಗಾರರಾದ ಗುರುಪ್ರಸಾದ್ ಕೆರಗೋಡು, ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಕ್ರೈಸ್ತ ಸಮುದಾಯದ ಮುಖಂಡರಾದ ಫಾ.ವೀರೇಶ್ ಮೋರೆಸ್, ಫಾ.ಜೆರಾಲ್ಡ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಯೂಸಫ್ ಖನ್ನಿ ಮಾತನಾಡಿ, ಕರ್ನಾಟಕದ ನಾಗರಿಕ ಸಮಾಜ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಜ್ಜಾಗುತ್ತಿದೆ. ನೀತಿಬದ್ಧ ನಾಗರಿಕ ಶಕ್ತಿಯನ್ನು ತಳಮಟ್ಟದ ತನಕ ಕಟ್ಟುವ, ಕೇಂದ್ರ ಸರಕಾರದ ನೀತಿಗಳ ವಿರುದ್ಧ ಜನಾಂದೋಲನವನ್ನು ರೂಪಿಸುವ, ರಾಜ್ಯ ಸರಕಾರ ಕೊಟ್ಟ ಮಾತು ಈಡೇರಿಸುವಂತೆ ಪಟ್ಟು ಹಿಡಿದು ಹೋರಾಡುವ ಧೃಡ ಸಂಕಲ್ಪವನ್ನು ಈ ಸಮಾವೇಶದಲ್ಲಿ ತೊಡಲಿದ್ದೇವೆ ಎಂದು ಹೇಳಿದರು.
ನಾವೆಲ್ಲಾ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆದರೆ ಇಂದು ಕೊಟ್ಟ ಮಾತು ತಪ್ಪಿದೆ. ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನೆಲ್ಲ ತಾನೂ ಮುಂದುವರೆಸುತ್ತಿದೆ. ಗ್ಯಾರಂಟಿಗಳಂತಹ ಕೆಲವು ಜನಹಿತ ನೀತಿಗಳನ್ನು ಮಾಡಿದ್ದು ಬಿಟ್ಟರೆ ಮಿಕ್ಕಂತೆ ಆಡಳಿತದಲ್ಲಿ ದೊಡ್ಡ ವ್ಯತ್ಯಾಸವಿಲ್ಲವಾಗಿದೆ. ಕಾಂಗ್ರೆಸ್ ಮಾತ್ರವಲ್ಲದೆ, ದೇಶದ ಎಲ್ಲ ವಿರೋಧ ಪಕ್ಷಗಳೂ ತಾವು ಅಧಿಕಾರಕ್ಕೆ ಬರುವ ಸಲುವಾಗಿ ಬಿಜೆಪಿಯನ್ನು ವಿರೋಧಿಸುತ್ತಿವೆಯಾಗಲೀ, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ನೀತಿಬದ್ಧ ಹೋರಾಟಕ್ಕೆ ಸಿದ್ಧರಿಲ್ಲ. ಮರು ನಿರ್ಮಾಣದ ಹಾದಿಯಲ್ಲಿ ಭಾರತವನ್ನು ಒಯ್ಯಲು ಇವರಿಂದ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.
-ನೂರ್ ಶ್ರೀಧರ್, ಕೇಂದ್ರ ಸಮಿತಿ ಸದಸ್ಯ, ಎದ್ದೇಳು ಕರ್ನಾಟಕ







