ಬೆಂಗಳೂರು | ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಪೊಲೀಸ್ ಸಿಬ್ಬಂದಿಗೆ ಗುದ್ದಿದ ಆರೋಪಿ ವಶಕ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮದ್ಯ ಸೇವಿಸಿ ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿದ ಚಾಲಕ, ಅಪಘಾತವೆಸಗಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಲ್ಲದೆ, ರಾದ್ಧಾಂತ ಸೃಷ್ಟಿಸಿದ ಘಟನೆ ಇಲ್ಲಿನ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಬಳಿ ವರದಿಯಾಗಿದೆ.
ಮೇ 25ರಂದು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ನಂದಕೃಷ್ಣ ಎಂಬ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಅಜಾಗರೂಕತೆಯಿಂದ ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಆರೋಪಿಯನ್ನು ಪೊಲೀಸರು ತಡೆಯಲು ಯತ್ನಿಸಿದ್ದರು. ಈ ವೇಳೆ ಕಾರು ನಿಲ್ಲಿಸದೆ, ರಸ್ತೆಯಲ್ಲಿ ಅಡ್ಡಹಾಕಿದ್ದ ಬ್ಯಾರಿಕೇಡ್ಗೆ ಗುದ್ದಿದ್ದಾನೆ. ಬಳಿಕ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದು ನಿಲ್ಲಿಸಿದ್ದ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಕಾಲಿಗೆ ಗಾಯವಾಗಿತ್ತು.
ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಎಷ್ಟೇ ಹೇಳಿದರೂ ಕಾರಿನ ಬಾಗಿಲು ತೆಗೆಯದ ಆರೋಪಿ, ಅರೆಪ್ರಜ್ಞಾವಸ್ಥೆಯಲ್ಲಿ ಕುಳಿತು, ದುರ್ವರ್ತನೆ ಪ್ರದರ್ಶಿಸಿದ್ದ. ನಂತರ ಗಾಜು ಒಡೆದು, ಬಾಗಿಲು ತೆಗೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





