ಬೆಂಗಳೂರು | ನಕಲಿ ದಾಖಲಾತಿಗಳ ಸೃಷ್ಟಿಸುತ್ತಿದ್ದ ಪ್ರಕರಣ: ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು: ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ಗೆ ಅಗತ್ಯವಿರುವ ಕೆಲ ದಾಖಲಾತಿಗಳ ನಕಲು ಸೃಷ್ಟಿಸುತ್ತಿದ್ದ ಪ್ರಕರಣದಡಿಯಲ್ಲಿ ಮೂವರು ಆರೋಪಿಗಳನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ದೀಪಕ್, ಉದಯ್ ಕುಮಾರ್ ಹಾಗೂ ರಾಮಕೃಷ್ಣ ಎಂಬವರನ್ನು ಬಂಧಿಸಲಾಗಿದ್ದು, ನಕಲಿ ದಾಖಲೆಗಳ ಸೃಷ್ಟಿಗೆ ಬಳಸುತ್ತಿದ್ದ ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ವಿವರಿಸಿದ್ದಾರೆ.
ವಿವಿಧ ಕಾರಣಗಳಿಗಾಗಿ ಅಗತ್ಯವಿರುವ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಪಡೆಯಲು ಸೇವಾಸಿಂಧು ಪೋರ್ಟಲ್ನ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ. ಇತ್ತೀಚೆಗೆ ಕರ್ನಾಟಕ ಮಾತ್ರವಲ್ಲದೆ ಅನ್ಯ ರಾಜ್ಯದ ಕೆಲವರು ಬೆಂಗಳೂರಿನಲ್ಲಿ ವಾಸವಾಗಿರುವುದಾಗಿ ನಕಲಿ ಬಾಡಿಗೆ ಒಪ್ಪಂದ ಪತ್ರ (ರೆಂಟಲ್ ಅಗ್ರಿಮೆಂಟ್ ಪೇಪರ್) ಸಲ್ಲಿಸಿರುವುದು ಕಂಡುಬಂದಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ಸ್ಥಳಿಯರಾಗಿದ್ದು, ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದರು. ನಗರದ ವಿವಿಧ ಠಾಣೆಗಳ ವ್ಯಾಪ್ತಿಗಳಲ್ಲಿ ಬೇರೆ ಬೇರೆಯವರಿಗೆ ನಕಲಿ ದಾಖಲೆಗಳನ್ನು ತಯಾರಿಸಿ ಕೊಟ್ಟಿರುವುದು ಕಂಡುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.





