ಬೆಂಗಳೂರು | ನಿರ್ಮಾಣ ಹಂತದ ಕಟ್ಟಡದ ಮೇಲೆ ರೀಲ್ಸ್ ಮಾಡುವ ವೇಳೆ ಕಾಲುಜಾರಿ ಬಿದ್ದು ಯುವತಿ ಮೃತ್ಯು

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ 14ನೇ ಮಹಡಿಯಲ್ಲಿ ರೀಲ್ಸ್ ಮಾಡುವ ವೇಳೆ ಕಾಲು ಜಾರಿಬಿದ್ದು ಯುವತಿ ಮೃತಪಟ್ಟಿರುವ ಘಟನೆ ಇಲ್ಲಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೋಯಲ ನಂದಿನಿ(21) ಮೃತ ಯುವತಿ ಎಂದು ಗುರುತಿಸಲಾಗಿದೆ. ಚಿತ್ತೂರು ಮೂಲದ ನಂದಿನಿ ಬಿಕಾಂ ಪದವೀಧರೆಯಾಗಿದ್ದು, ನಗರದ ಭುವನೇಶ್ವರಿ ಲೇಔಟ್ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದರು. ರಿಲಯನ್ಸ್ ಮಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ನಂದಿನಿ, ಜೂ.23ರ ಸೋಮವಾರ ಸಂಜೆ ಕೆಲಸದಿಂದ ವಾಪಸ್ ಬಂದಿದ್ದರು. ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜತೆ ಮಾತನಾಡಿ ಪಾರ್ಟಿ ಮಾಡುವ ಸಲುವಾಗಿ ರಾಯಸಂದ್ರ ಮುಖ್ಯರಸ್ತೆ ಸಮೀಪವಿರುವ ನಿರ್ಮಾಣ ಹಂತದ ಅಪಾರ್ಟ್ಮೆಂಟ್ವೊಂದಕ್ಕೆ ಆಗಮಿಸಿದ್ದರು. ನಾಲ್ವರು ರಾತ್ರಿ 9 ಗಂಟೆಯವರೆಗೂ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ಬಳಿಕ ಕಟ್ಟಡದ 14ನೇ ಮಹಡಿಗೆ ತೆರಳಿ ರೀಲ್ಸ್ ಮಾಡುವಾಗ ನಂದಿನಿ ಕಾಲುಜಾರಿ ಕೆಳಗೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಮಗಳ ಸಾವಿನ ವಿಚಾರ ಗೊತ್ತಾದ ಬಳಿಕ ಮೃತ ನಂದಿನಿ ತಾಯಿಯು ನಗರಕ್ಕೆ ಆಗಮಿಸಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಮಗಳು ನಂದಿನಿ ಜತೆಗಿದ್ದ ಇಬ್ಬರು ಯುವಕರು ಹಾಗೂ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಿದ್ದಾರೆ. ಈ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





