ಬೆಂಗಳೂರು | ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ತಾಯಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ತಾಯಿಯೊಬ್ಬಳು ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಇಲ್ಲಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಮಕ್ಕಳ ಆಪ್ತ ಸಮಾಲೋಚಕಿಯೊಬ್ಬರು ನೀಡಿದ ದೂರಿನನ್ವಯ ಬಾಲಕಿಯ ತಾಯಿ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ದಾಖಲಿಸಿ ಮಹಿಳೆಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
9ನೇ ತರಗತಿ ಓದುತ್ತಿರುವ ಬಾಲಕಿಯ ಶಾಲೆಗೆ ಇತ್ತೀಚೆಗೆ ಆಪ್ತ ಸಮಾಲೋಚಕರು ಬಂದಿದ್ದರು. ಈ ವೇಳೆ ಕೌನ್ಸಿಲಿಂಗ್ ಮಾಡುವಾಗ ಬಾಲಕಿಯು ತನ್ನ ತಾಯಿಯಿಂದ ಲೈಂಗಿಕ ದೌರ್ಜನ್ಯ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಳು. ಮದುವೆ ಬಳಿಕ ಗಂಡನ ಜೊತೆ ಹೇಗಿರಬೇಕೆಂದು ಹೇಳಿ ತನ್ನ ಅಂಗಾಂಗಗಳನ್ನು ತಾಯಿ ಮುಟ್ಟುತ್ತಿರುವುದಾಗಿ ನೋವು ತೋಡಿಕೊಂಡಿದ್ದಳು. ಈ ವಿಷಯ ಅರಿತ ಸಮಾಲೋಚಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ತಾಯಿಯನ್ನು ಪ್ರಾಥಮಿಕ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





