ಬೆಂಗಳೂರು | ಹೆಚ್ಚುವರಿ ಕಾಫಿ ಕಪ್ ಕೊಡಲು ನಿರಾಕರಣೆ : ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆಗೈದ ಓರ್ವ ಸೆರೆ, ಮತ್ತಿಬ್ಬರಿಗೆ ಶೋಧ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಹೆಚ್ಚುವರಿ ಕಾಫಿ ಕಪ್ ಕೊಡಲು ನಿರಾಕರಿಸಿದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಸಂಬಂಧ ಓರ್ವ ಆರೋಪಿಯನ್ನು ಇಲ್ಲಿನ ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಇಸ್ಲಾಂಮುಲ್ ಎಂಬುವರು ನೀಡಿದ ದೂರಿನನ್ವಯ ಆರೋಪಿ ಅರುಣ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಹಲ್ಲೆಯಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಶೇಷಾದ್ರಿಪುರದ ‘ನಮ್ಮ ಫಿಲ್ಟರ್ ಕಾಫಿ' ಶಾಪ್ನಲ್ಲಿ ಜು.2ರಂದು ಘಟನೆ ನಡೆದಿದೆ. ಹಲ್ಲೆಗೊಳಗಾದ ಇಸ್ಲಾಂಮುಲ್ ಅಸ್ಸಾಂ ಮೂಲದವನಾಗಿದ್ದು, ಆರು ತಿಂಗಳಿಂದ ಕಾಫಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜು.2ರ ಬುಧವಾರ ಸಂಜೆ ಸುಮಾರು 6.30ರ ಸುಮಾರಿಗೆ ಅರುಣ್ ಕುಮಾರ್ ಇನ್ನಿಬ್ಬರ ಸ್ನೇಹಿತರೊಂದಿಗೆ ಬಂದು ಕಾಫಿ ಆರ್ಡರ್ ಮಾಡಿದ್ದರು. ಈ ವೇಳೆ ಕಾಫಿಗೆ ಸಕ್ಕರೆ ಹೆಚ್ಚಾಗಿದ್ದರಿಂದ ಅರುಣ್ ಕುಮಾರ್ ಮತ್ತು ಸ್ನೇಹಿತರು ಮತ್ತೊಂದು ಲೋಟಕ್ಕೆ ಮಿಕ್ಸ್ ಮಾಡಲು ಖಾಲಿ ಲೋಟ ಕೊಡುವಂತೆ ಕೇಳಿದ್ದರು. ಖಾಲಿ ಲೋಟ ನೀಡಲು ಸಿಬ್ಬಂದಿ ನಿರಾಕರಿಸಿದ್ದ. ಅಲ್ಲದೆ, ಹೆಚ್ಚುವರಿ ಕಾಫಿ ಆರ್ಡರ್ ಮಾಡುವಂತೆ ಸೂಚಿಸಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆ ವಾಕ್ಸಮರ ಜೋರಾಗಿ ಗಲಾಟೆಗೆ ತಿರುಗಿತ್ತು. ಅರುಣ್ ಕುಮಾರ್ ಮತ್ತು ಸ್ನೇಹಿತರು ಜೊತೆಗೂಡಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆ ದೃಶ್ಯ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಅಕ್ಷಯ್ ಎಂ. ಹಾಕಾಯ್ ಮಾಹಿತಿ ನೀಡಿದ್ದಾರೆ.





