ಬೆಂಗಳೂರು | 40 ಕೋಟಿ ರೂ. ಚೀಟಿ ಹಣ ಕಟ್ಟಿಸಿಕೊಂಡು ದಂಪತಿ ಪರಾರಿ : ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಸಾರ್ವಜನಿಕರಿಂದ ಸುಮಾರು 40ಕೋಟಿ ರೂ. ಚೀಟಿ ನೆಪದಲ್ಲಿ ಹಣ ಕಟ್ಟಿಸಿಕೊಂಡು ದಂಪತಿ ಪರಾರಿಯಾಗಿರುವ ಘಟನೆ ಸಂಬಂಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜರಗನಹಳ್ಳಿಯ ಸುಧಾ ಮತ್ತು ಸಿದ್ದಿಚಾರಿ ಎಂಬುವರೇ ಪರಾರಿಯಾದ ದಂಪತಿ ಎಂದು ಗುರುತಿಸಲಾಗಿದೆ.
ಚೀಟಿ ಹಣ ಕಟ್ಟಿದವರ ದೂರು ಆಧರಿಸಿ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಧಾ ದಂಪತಿ ಒಂದು ತಿಂಗಳಿಂದ ಪತ್ತೆಯಾಗಿಲ್ಲ. ಮೊಬೈಲ್ ಬಳಸುತ್ತಿಲ್ಲ, ಸಂಬಂಧಿಕರ ಸಂಪರ್ಕಕ್ಕೂ ಸಿಕ್ಕಿಲ್ಲ. ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಜರಗನಹಳ್ಳಿಯಲ್ಲಿ ವಾಸವಾಗಿದ್ದ ಸುಧಾ ಎಂಬುವರ ಕುಟುಂಬ 20 ವರ್ಷದಿಂದ ಚೀಟಿ ವ್ಯವಹಾರ ನಡೆಸುತ್ತಿದೆ. ಈ ಕುಟುಂಬ ಸುಮಾರು 600ಕ್ಕೂ ಹೆಚ್ಚು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡಿದೆ. ಸಾರ್ವಜನಿಕರು 5 ರಿಂದ 10 ಲಕ್ಷ ರೂ. ವರೆಗೂ ಚೀಟಿ ಹಣ ಕಟ್ಟಿದ್ದಾರೆ. ಆದರೆ, ಸುಧಾ ಮತ್ತು ಆಕೆಯ ಪತಿ ಸಿದ್ದಾಚಾರಿ ಹಿಂದಿನ ಒಂದು ವರ್ಷದಿಂದ ಚೀಟಿ ಹಣ ನೀಡದೆ ಸತಾಯಿಸುತ್ತಿದ್ದರು. ಈ ನಡುವೆ ಸುಧಾ ಮತ್ತು ಸಿದ್ದಾಚಾರಿ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಜೂ.3ರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ, ದಂಪತಿ ಬ್ಯಾಂಕ್ನಲ್ಲಿದ್ದ ತಮ್ಮ ಚಿನ್ನವನ್ನೆಲ್ಲ ಬಿಡಿಸಿಕೊಂಡು ಬಳಿಕ, ಮನೆಯಲ್ಲೇ ಮೊಬೈಲ್ ಬಿಟ್ಟು, ಬೇರೆಲ್ಲ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.