ಬೆಂಗಳೂರು | ವಂಚನೆ ಪ್ರಕರಣದ ಆರೋಪಿ ಪರ ವಕೀಲನೆಂದು ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಪ್ರೊಫೆಸರ್ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ವಕೀಲರ ಸೋಗಿನಲ್ಲಿ ವಂಚನೆ ಪ್ರಕರಣದ ಆರೋಪಿ ಪರ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರೊಫೆಸರ್ ನನ್ನು ಇಲ್ಲಿನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರಾಜಾಜಿನಗರ 4ನೇ ಹಂತದ ನಿವಾಸಿ ಯೋಗಾನಂದ್(52) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಪ್ರಭಾವಿ ರಾಜಕಾರಣಿಗಳ ಆಪ್ತೆಯೆಂದು ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ ಸವಿತಾಳ ಪರ ವಕೀಲ ಎಂದು ಹೇಳಿಕೊಂಡು ಬಸವೇಶ್ವರನಗರ ಠಾಣೆಗೆ ತೆರಳಿದ್ದ ಯೋಗಾನಂದ್, ‘ಯಾವ ಆಧಾರದಲ್ಲಿ ಬಂಧಿಸಿದ್ದೀರಿ?’ ಎನ್ನುತ್ತಾ, ಪೊಲೀಸರ ವಶದಲ್ಲಿದ್ದ ಆರೋಪಿ ಸವಿತಾಳ ಬಳಿಯಿದ್ದ ಮನೆ ಬೀಗವನ್ನು ಪಡೆದುಕೊಂಡು ಹೋಗಲು ಯತ್ನಿಸಿದ್ದ.
‘ಬೀಗವನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ' ಎಂದು ತಡೆದಾಗ ಪೊಲೀಸ್ ಸಿಬ್ಬಂದಿಗಳಿಗೆ ಬೆದರಿಸಿದ್ದ. ಇದೇ ವೇಳೆ ಸ್ಥಳದಲ್ಲಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜ್, ಈ ಹಿಂದೆ ತಾವು ಬಸವೇಶ್ವರ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಆರೋಪಿ ಯೋಗಾನಂದ್ನನ್ನು ವೃದ್ದೆಯ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಬಂಧಿಸಿದ್ದನ್ನು ನೆನಪಿಸಿಕೊಂಡಿದ್ದರು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ‘ತಾನು ವಕೀಲನಲ್ಲ, ಪ್ರೊಫೆಸರ್' ಎಂದು ಬಾಯ್ಬಿಟ್ಟಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಸದ್ಯ ಠಾಣೆಯ ಬಳಿ ರಂಪಾಟ ಸೃಷ್ಟಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಯೋಗಾನಂದ್ನನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







