ಬೆಂಗಳೂರು | ನಕಲಿ ದಾಖಲೆಗಳ ಮೂಲಕ ಶೂರಿಟಿ ನೀಡುತ್ತಿದ್ದ ಪ್ರಕರಣ: ಎಂಟು ಮಂದಿ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡುತ್ತಿದ್ದ ಪ್ರಕರಣದಡಿ ಎಂಟು ಮಂದಿ ಆರೋಪಿಗಳನ್ನು ಇಲ್ಲಿನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರಫಿ, ಪ್ರವೀಣ್ ಕುಮಾರ್, ಅಭಿಷೇಕ್, ಗೋವಿಂದ ನಾಯ್ಕ್ ಮತ್ತು ದೊರೆರಾಜು ಹಾಗೂ ಮತ್ತೊಂದು ಪ್ರಕರಣದಲ್ಲಿ ಅಬೀದ್, ವಾಸಿಂ ಅಹಮ್ಮದ್ ಮತ್ತು ಗೋವಿಂದರಾಜು ಎಂಬವರನ್ನು ಬಂಧಿಸಲಾಗಿದ್ದು, ಅವರಿಂದ 47 ಆಧಾರ್ ಕಾರ್ಡ್ಸ್, 122 ದಾಖಲಾತಿಗಳು, 7 ಮೊಬೈಲ್ ಫೋನ್ಗಳು, 1 ಪೆನ್ ಡ್ರೈವ್, ನಕಲಿ ಸೀಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ಶೂರಿಟಿಗಳನ್ನು ನೀಡುತ್ತಿದ್ದರು. ಭೂಮಿ ಆ್ಯಪ್ನ ಮೂಲಕ ಬೇರೆ ಬೇರೆಯವರ ಪಹಣಿಯ ವಿವರ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ಅದರಲ್ಲಿನ ವಿಳಾಸಕ್ಕೆ ಹೊಂದಿಕೆಯಾಗುವಂತೆ ನಕಲಿ ಆಧಾರ್ ಕಾರ್ಡ್ ಮಾದರಿ ಸೃಷ್ಟಿಸುತ್ತಿದ್ದರು. ಆ ಆಧಾರ್ಗೆ ಯಾವುದೋ ಒಂದು ನಂಬರ್ ನಮೂದಿಸಿ, ಶೂರಿಟಿ ನೀಡಲು ಹೋಗುವವರ ಫೋಟೋ ಸೇರಿಸುತ್ತಿದ್ದರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ
ಪ್ರಕರಣವೊಂದರಲ್ಲಿ ನ್ಯಾಯಾಲಯದ ಕಲಾಪ ಪ್ರಕ್ರಿಯೆ ನಡೆಯುವಾಗ ಆರೋಪಿಗಳ ವಂಚನೆ ಬಯಲಾಗಿತ್ತು. ಕೂಡಲೇ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







