ಬೆಂಗಳೂರು | ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ: ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ | PC: Meta Ai
ಬೆಂಗಳೂರು: ಪೊಲೀಸ್ ಹೆಡ್ ಕಾನ್ಸ್ಟೇಬಲ್ ಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ಸಂಬಂಧ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ನಾಲ್ವರನ್ನು ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ನಿವಾಸಿಗಳಾದ ತಬ್ರೇಝ್, ಅಬ್ರು, ಸಲ್ಮಾನ್ ಪಾಶಾ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜು.26ರಂದು ಚಾಮರಾಜಪೇಟೆಯ ವಾಲ್ಮೀಕಿನಗರದ 2ನೆ ಮುಖ್ಯರಸ್ತೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಸಂತೋಷ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಎಡಗೈಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪಾನಮತ್ತ ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿರುವಾಗ ಗಸ್ತು ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಸಂತೋಷ್ ಗಮನಿಸಿದ್ದರು. ಜಗಳ ಬಿಡಿಸಲು ಹೋದಾಗ ಆರೋಪಿಗಳು ಸಂತೋಷ್ ಹಾಗೂ ಮತ್ತೋರ್ವ ಸ್ಥಳೀಯ ವ್ಯಕ್ತಿ ಮುಹಮ್ಮದ್ ಶಫೀವುಲ್ಲಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.





