ಬೆಂಗಳೂರು | ಕೌಟುಂಬಿಕ ಕಲಹ: ಮಗುವಿಗೆ ವಿಷವುಣಿಸಿ ತಾನೂ ಕುಡಿದ ತಾಯಿ, ಮಗು ಮೃತ್ಯು

ಬೆಂಗಳೂರು : ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ತನ್ನ ಮಗುವಿಗೆ ವಿಷ ಕುಡಿಸಿ ನಂತರ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ದುರದೃಷ್ಟವಶಾತ್ ಮಗು ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದ್ದು, ತಾಯಿ ಚಂದ್ರಿಕಾ(26) ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ತಿಗಳರಪಾಳ್ಯದಲ್ಲಿ ಲೋಕೇಶ್-ಚಂದ್ರಿಕಾ ದಂಪತಿ ವಾಸವಾಗಿದ್ದು, ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದೆ. ಜು.30 ರಾತ್ರಿ ಲೋಕೇಶ್ ಅವರು ಕೆಲಸಕ್ಕೆ ಹೋಗಿದ್ದಾಗ, ಗಂಡನ ಮೇಲಿನ ಕೋಪಕ್ಕೆ ಚಂದ್ರಿಕಾ ಕ್ರಿಮಿನಾಶಕವನ್ನು ಟೀ ಯಲ್ಲಿ ಬೆರೆಸಿ ಅದನ್ನು ಮೊದಲು ಮಗುವಿಗೆ ಕುಡಿಸಿ ನಂತರ ತಾನೂ ಸೇವಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಟ್ಟೆ ನೋವಿನಿಂದ ಚಂದ್ರಿಕಾ ಕೂಗಾಡುತ್ತಿದ್ದಾಗ ಅಕ್ಕಪಕ್ಕದವರು ಬಂದು ನೋಡಿ ತಕ್ಷಣ ತಾಯಿ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಚಂದ್ರಿಕಾ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







