ಬೆಂಗಳೂರು | ಅಧಿಕಾರಿಗಳ ಸೋಗಿನಲ್ಲಿ 1.50 ಕೋಟಿ ರೂ. ಲೂಟಿ ಮಾಡಿದ್ದ ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.22 : ಪ್ರಾಧ್ಯಾಪಕರೊಬ್ಬರ ಮನೆಗೆ ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ನಾಲ್ವರು, ಪರಿಶೀಲನೆ ನಡೆಸುವ ನೆಪಮಾಡಿ 1.50 ಕೋಟಿ ರೂ. ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುಷ್ಕರ್ಮಿಗಳ ಸುಳಿವನ್ನು ಯಲಹಂಕ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸೆ.16ರಂದು ಮಧ್ಯಾಹ್ನ ಸಿಂಧಿ ಕಾಲೇಜು ಪ್ರಾಧ್ಯಾಪಕ ಗಿರಿರಾಜ್ ಅವರ ಯಲಹಂಕದ ಮನೆಗೆ ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಖದೀಮರು ಬಂದಿದ್ದರು. ನಕಲಿ ನಂಬರ್ ಪ್ಲೇಟ್ ಹಾಕಿದ್ದ ಕಾರನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.
ಗಿರಿರಾಜ್ ಮನೆಯಲ್ಲಿ ಇಲ್ಲದ ವೇಳೆ ಬಂದ ಖದೀಮರು, ಗಿರಿರಾಜ್ ಅವರ ಪತ್ನಿ ಹಾಗೂ ತಂದೆ-ತಾಯಿಗೆ ನಾವು ಸರಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಪರಿಶೀಲನೆ ಮಾಡುವ ನೆಪಮಾಡಿ ಬಳಿಕ ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಮನೆಯವರನ್ನು ಕೇಳಿದ್ದಾರೆ. ಹಣ ಎಲ್ಲಿದೆ ಎಂದು ಪ್ರಶ್ನಿಸಿ ಗದರಿದಾಗ, ಅಡುಗೆ ಮನೆಯಲ್ಲಿಟ್ಟಿದ್ದ ಹಣವನ್ನು ಖದೀಮರು ತೆಗೆದುಕೊಂಡಿದ್ದರು.
ಮನೆಯವರ ಬಳಿ ಗಿರಿರಾಜ್ ಎಲ್ಲಿದ್ದಾರೆ ಎಂದು ಕೇಳಿದ್ದರು. ಅವರು ಇಲ್ಲ ಎಂದಾಗ ಮನೆಯಲ್ಲಿದ್ದ 1.50 ಕೋಟಿ ರೂ. ಹಣವಿದ್ದ ಬ್ಯಾಗ್, 50 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ಕೆಲಸ ಮುಗಿಸಿಕೊಂಡು ಕಾಲೇಜಿನಿಂದ ಗಿರಿರಾಜ್ ಅವರು ಮನೆಗೆ ಬಂದಾಗ ವಿಷಯ ತಿಳಿದು, ವಂಚನೆಗೊಳಗಾಗಿರುವುದು ಗೊತ್ತಾಗಿ ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ.
ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಸಜೀತ್ ಅವರು ರಚಿಸಿದ ವಿಶೇಷ ತಂಡಗಳು ಸಿಸಿ ಟಿವಿ ಕ್ಯಾಮರಾಗಳ ದೃಶ್ಯವನ್ನು ತಪಾಸಣೆ ನಡೆಸಿ ದುಷ್ಕರ್ಮಿಗಳ ಸುಳಿವು ಪತ್ತೆಹಚ್ಚಿ ನೆರೆಯ ಆಂಧ್ರಪ್ರದೇಶಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.







