ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ ಆರೋಪ: ಮೂವರು ಶ್ರೀಲಂಕಾ ಪ್ರಜೆಗಳು ವಶಕ್ಕೆ

ಬೆಂಗಳೂರು, ಸೆ.29 : ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪದಡಿ ಮೂವರು ಶ್ರೀಲಂಕಾದ ಪ್ರಜೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ದೇವನಹಳ್ಳಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ ಈ ಮೂವರು ನೆಲೆಸಿದ್ದರು. ಈ ಕುರಿತು ವಿದೇಶಿಗರ ಕಾಯ್ದೆಯಡಿ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಯಾವ ಕಾರಣಕ್ಕಾಗಿ ಅನಧಿಕೃವಾಗಿ ಬೆಂಗಳೂರಲ್ಲಿ ವಾಸವಾಗಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆಸಲಾಗಿದ್ದು, ನಂತರ ಗಡಿಪಾರು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಪಾಸ್ ಪೋರ್ಟ್ ಮತ್ತು ವೀಸಾ ಇಲ್ಲದೇ 2024ರಲ್ಲಿ ಜಾಫ್ನಾದಿಂದ ಬೋಟ್ ಮೂಲಕ ತಮಿಳುನಾಡಿನ ರಾಮೇಶ್ವರಂಗೆ ಬಂದಿದ್ದ ಆರೋಪಿಗಳು, ಅಲ್ಲಿದ್ದ ವಿದೇಶಿ ಮೂಲದ ಮತ್ತೋರ್ವ ವ್ಯಕ್ತಿಯ ನೆರವು ಪಡೆದು ಬೆಂಗಳೂರು ತಲುಪಿದ್ದರು. ನಂತರ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದರು ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ.





