ಬೆಂಗಳೂರು | ವಿದೇಶಿ ಅಂಚೆ ಕಚೇರಿ ಮೂಲಕ ಮಾದಕ ವಸ್ತು ಸಾಗಾಟ ಜಾಲ; 5.50 ಕೋಟಿ ರೂ.ಮೌಲ್ಯದ ಮಾಲು ಜಪ್ತಿ

ಬೆಂಗಳೂರು : ನಗರದಲ್ಲಿರುವ ವಿದೇಶಿ ಅಂಚೆ ಕಚೇರಿ ಹಾಗೂ ಮಾದಕ ವಸ್ತುಗಳ ಅಡ್ಡೆಗಳ ಮೇಲೆ ಕಾರ್ಯಾಚರಣೆ ನಡೆಸಿ 5.50 ಕೋಟಿ ರೂ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣದಲ್ಲಿ ಡುರೊ ಮಿಶೆಲ್ ಹಾಗೂ ಇಬು ಸ್ಯಾಮುಯೆಲ್ ಎಂಬುವರನ್ನು ಬಂಧಿಸಿ, 1.47 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಂಡರೆ, ಮತ್ತೊಂದು ಪ್ರಕರಣದಲ್ಲಿ ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಚಾಕೊಲೇಟ್ ಹಾಗೂ ಬಿಸ್ಕತ್ ಪ್ಯಾಕೇಟ್‍ಗಳಲ್ಲಿ ಬಂದಿದ್ದ ಮೂರು ಕೋಟಿ ಮೌಲ್ಯದ ಹೈಡ್ರೊ ಗಾಂಜವನ್ನು ವಶಕ್ಕೆ ಪಡೆಯಲಾಗಿದೆ.
ವ್ಯಾಪಾರ ವೀಸಾದಡಿ 2017ರಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಗಳು ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ತಮಿಳುನಾಡಿನಿಂದ ಬಟ್ಟೆ ಖರೀದಿಸಿ ನೈಜೀರಿಯಾಗೆ ರಫ್ತು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಭವಾಗಿ ಹಣ ಸಂಪಾದನೆ ಮಾಡಲು ನಗರದ ಹೊರ ಭಾಗದಿಂದ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದರು. ಬಳಿಕ ನಗರದ ಕಾಲೇಜುಗಳ ಮುಂದೆ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಆರೋಪಿಗಳ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಥೈಲ್ಯಾಂಡ್‍ನಿಂದ ಬಂದಿದ್ದ ಅನುಮಾನಾಸ್ಪಾದ ಪೆಟ್ಟಿಗೆಯಲ್ಲಿ 3 ಕೋಟಿ ಮೌಲ್ಯದ 3 ಕೆಜಿ ಹೈಡ್ರೊಗಾಂಜಾವನ್ನು ಸಿಸಿಬಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದೆ.ಈ ಸಂಬಂಧ ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.







