ಬೆಂಗಳೂರು | ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ತಂದೆ, ಓರ್ವ ಮಗ ಮೃತ್ಯು; ತಾಯಿ, ಮತ್ತೊಬ್ಬ ಮಗ ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯಲ್ಲೇ ತಂದೆ ಹಾಗೂ ಒಬ್ಬ ಮಗ ಮೃತಪಟ್ಟರೆ, ಅಸ್ವಸ್ಥಗೊಂಡಿದ್ದ ತಾಯಿ ಮತ್ತು ಇನ್ನೊಬ್ಬ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ ಅ.30ರ ಗುರುವಾರ ರಾತ್ರಿ ಘಟನೆ ನಡೆದಿದೆ. ತಂದೆ ಕುಮಾರಪ್ಪ ಎಂಬುವರು ನೇಣು ಬಿಗಿದುಕೊಂಡಿದ್ದಾರೆ. ಅನಂತರ ತಾಯಿ ಮತ್ತು ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ.
ಕುಮಾರಪ್ಪ(60) ಮತ್ತು ಆತನ ಮಗ ಅರುಣ್(30) ಮನೆಯಲ್ಲೇ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡಿದ್ದ ಕುಮಾರಪ್ಪನ ಹೆಂಡತಿ ರಮಾ(55) ಮತ್ತು ಮತ್ತೊಬ್ಬ ಮಗ ಅಕ್ಷಯ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳದು ಬಂದಿದೆ.
ಮೃತರ ಮನೆಯಲ್ಲಿ ಮದ್ಯದ ಬಾಟಲಿ ಮತ್ತು ಕ್ರಿಮಿನಾಶಕಗಳ ಬಾಟಲಿಗಳು ಪತ್ತೆಯಾಗಿವೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಜಾಲ ಠಾಣಾ ಪೊಲೀಸರು ಹಾಗೂ ದೇವನಹಳ್ಳಿ ಎಸಿಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಯಲಹಂಕ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







