ಬೆಂಗಳೂರು | ಮನೆ ಮಾಲಕರು ಸಾಕಿದ್ದ ಶ್ವಾನದ ಹತ್ಯೆ : ಮನೆಗೆಲಸದ ಮಹಿಳೆ ವಶಕ್ಕೆ

ಬೆಂಗಳೂರು : ಮನೆ ಮಾಲಕರು ಸಾಕಿದ್ದ ಶ್ವಾನವನ್ನು ಮನೆಗೆಲಸದ ಮಹಿಳೆ ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಕ್ಟೋಬರ್ 31ರಂದು ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೂಫಿ ಎಂಬ ಹೆಸರಿನ ಶ್ವಾನವನ್ನು ಮನೆ ಕೆಲಸದಾಕೆ ಪುಷ್ಪಲತಾ ನೆಲಕ್ಕೆ ಬಡಿದು, ಕತ್ತು ಬಿಗಿದು ಹತ್ಯೆಗೈದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಮನೆ ಮಾಲಕಿ ರಾಶಿ ಪೂಜಾರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪುಷ್ಪಲತಾ ವಿರುದ್ಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪುಷ್ಪಲತಾಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾಕು ನಾಯಿ ನೋಡಿಕೊಳ್ಳಲು ಪುಷ್ಪಲತಾಳನ್ನು ನೇಮಿಸಿಕೊಳ್ಳಲಾಗಿತ್ತು. ಅಕ್ಟೋಬರ್ 31ರಂದು ನಾಯಿಯನ್ನು ವಾಕಿಂಗ್‍ಗೆ ಕರೆದೊಯ್ದಿದ್ದ ಪುಷ್ಪಲತಾ ಲಿಫ್ಟ್ ನೊಳಗೆ ಬರುತ್ತಿದ್ದಂತೆ ನೆಲಕ್ಕೆ ಬಡಿದು, ಬೆಲ್ಟ್ ನಿಂದ ಕತ್ತು ಬಿಗಿದು ಸಾಯಿಸಿದ್ದಾಳೆ. ಬಳಿಕ ನಾಯಿಯ ಕಳೇಬರವನ್ನು ಅಮಾನವೀಯವಾಗಿ ಎಳೆದು ತಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿತು ಎಂದು ಆರೋಪಿ ಸುಳ್ಳು ಹೇಳಿದ್ದಾಗಿ ಶ್ವಾನದ ಮಾಲಕಿ ರಾಶಿ ಪೂಜಾರಿ ಹೇಳಿದ್ದಾರೆ. ಬಳಿಕ ಅನುಮಾನಗೊಂಡು ಮಾರನೇ ದಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಕೆಲಸದಾಕೆಯ ಕೃತ್ಯ ಬೆಳಕಿಗೆ ಬಂದಿದೆ.
ಈ ಘಟನೆಯ ವಿಡಿಯೋವನ್ನು ರಾಶಿ ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶ್ವಾನ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.







