ಬೆಂಗಳೂರು | 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನ: 23.64 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸುಮಾರು 150ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಇಲ್ಲಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 23.64 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಮೈಸೂರಿನ ನಿವಾಸಿ ಸೈಯದ್ ಅಸ್ಲಂ ಯಾನೆ ಅಸ್ಲಂ(40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬೇರೆ ಬೇರೆ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೈಯದ್ ಅಸ್ಲಂನನ್ನು ಪತ್ತೆ ಹಚ್ಚಲು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ವಿ.ಜೆ.ಸಜೀತ್ ಅವರು ಪೊಲೀಸರ ವಿಶೇಷ ತಂಡಗಳನ್ನು ರಚಿಸಿದ್ದರು.
ಅದರಂತೆ ಈ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಮಾಹಿತಿಗಳನ್ನು ಕಲೆಹಾಕಿ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಈಗಾಗಲೇ ಬೆಂಗಳೂರು ನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ನಂಜನಗೂಡು, ಕನಕಪುರ ಸೇರಿದಂತೆ ಇನ್ನೂ ಹಲವೆಡೆ ರಾತ್ರಿ ವೇಳೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿ ಸೈಯದ್ ಅಸ್ಲಂ ಎಂಬುವನನ್ನು ಬಂಧಿಸಿವೆ.
ಆರೋಪಿಯನ್ನು ಸುದೀರ್ಘ ವಿಚಾರಣೆ ಒಳಪಡಿಸಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 22.80 ಲಕ್ಷ ರೂ. ಬೆಲೆ ಬಾಳುವ 120 ಗ್ರಾಂ ಚಿನ್ನಾಭರಣಗಳು, 4 ಕೆ.ಜಿ. 292 ಗ್ರಾಂ ಬೆಳ್ಳಿ ವಸ್ತುಗಳು, 2 ಮೊಬೈಲ್, 3 ಕೈಗಡಿಯಾರ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ 2, ಬಾಗಲಗುಂಟೆ 1 ಹಾಗೂ ಸೋಲದೇವನಹಳ್ಳಿಯ 3 ಪ್ರಕರಣಗಳು ಪತ್ತೆಯಾಗಿವೆ ಎಂದು ವಿದ್ಯಾರಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 6 ಪ್ರಕರಣಗಳು, ಮೈಸೂರಿನ ಮಂಡಿ, ಹುಬ್ಬಳ್ಳಿಯ ವಿದ್ಯಾನಗರ, ಹೊಸಕೋಟೆ, ದಾವಣಗೆರೆಯ ಹೊನ್ನಾಳ್ಳಿ, ರಾಣೆಬೆನ್ನೂರು, ಬಾಣವಾರ, ಶಿಗ್ಗಾಂವ್ ಠಾಣೆಗಳಲ್ಲಿ ತಲಾ 1, ಶಿವಮೊಗ್ಗದ 29 ವಿವಿಧ ಪೊಲೀಸ್ ಠಾಣೆಗಳಲ್ಲಿ, ಕೆ.ಆರ್.ನಗರ, ಸಾಲಿಗ್ರಾಮ ತಲಾ 1, ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ 3, ಕಡೂರು ಪೊಲೀಸ್ ಠಾಣೆಯಲ್ಲಿ 4, ಚಿಕ್ಕಮಗಳೂರು 2 ಪ್ರಕರಣಗಳು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ಆರೋಪಿಯು ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







