ಸಾಫ್ಟ್ವೇರ್ ಕಂಪೆನಿ ಹೆಸರಿನಲ್ಲಿ ಅಮೆರಿಕಾ ಪ್ರಜೆಗಳಿಗೆ ವಂಚನೆ ಆರೋಪ: ಬೆಂಗಳೂರಿನಲ್ಲಿ 21 ಮಂದಿ ವಶಕ್ಕೆ, ವಿಚಾರಣೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ನಕಲಿ ಸಾಫ್ಟ್ವೇರ್ ಕಂಪೆನಿಯೊಂದು ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಹೆಸರಲ್ಲಿ ಅಮೆರಿಕ ಪ್ರಜೆಗಳನ್ನು ವಂಚನೆ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸರು ಹಾಗೂ ಸೈಬರ್ ಕಮಾಂಡ್ ಯೂನಿಟ್ ಅಧಿಕಾರಿಗಳು 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಶನಿವಾರ ಇಲ್ಲಿನ ವರ್ತೂರು ರಸ್ತೆಯಲ್ಲಿರುವ ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಹೆಸರಿನಲ್ಲಿ ನಡೆಯುತ್ತಿದ್ದ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ವಂಚನೆ ಸಂಬಂಧ ಸದ್ಯ ವೈಟ್ಫೀಲ್ಡ್ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಸ್ಕ್ ಕಮ್ಯುನಿಕೇಷನ್ಸ್ ಹೆಸರಿನಲ್ಲಿ ನಕಲಿ ಐಟಿ ಕಂಪೆನಿ ತೆರೆಲಾಗಿತ್ತು. ಟೆಕ್ನಿಕಲ್ ಸಪೋರ್ಟ್ ಹೆಸರಲ್ಲಿ ವಿದೇಶಿ ಪ್ರಜೆಗಳಿಗೆ ವಂಚನೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೈಬರ್ ಕಮಾಂಡ್ ಯೂನಿಟ್ಗೆ ಮಾಹಿತಿ ಹಿನ್ನೆಲೆ ಸೈಬರ್ ಕಮಾಂಡ್ ಯೂನಿಟ್ ಡಿಜಿಪಿ ಡಾ.ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಎರಡು ದಿನ ಸತತ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ.ಈ ವೇಳೆ ಈ ಕಂಪೆನಿಯಲ್ಲಿ 21 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಎಲ್ಲರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಲಾಗಿದೆ.
ಜತೆಗೆ, ಮಹಜರು ನಡೆಸಿ ಕಂಪ್ಯೂಟರ್, ಡಿಜಿಟಲ್ ಡಿವೈಸ್, ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಸೈಬರ್ ಕಮಾಂಡ್ ಯೂನಿಟ್ ತಿಳಿಸಿದೆ.







