Bengaluru | ಮಗಳ ಮೇಲೆಯೇ ಮಾರಕಾಸ್ತ್ರ ಬೀಸಿದ ಆರೋಪ: ತಾಯಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ದೇವಾಲಯದಲ್ಲೇ ತಾಯಿಯೊಬ್ಬಳು ತನ್ನ ಮಗಳ ಮೇಲೆ ಮಾರಕಾಸ್ತ್ರ ಬೀಸಿ ಹತ್ಯೆಗೆ ಯತ್ನಿಸಿದ ಆರೋಪದಡಿ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಿಗೆಹಳ್ಳಿಯ ಅಗ್ರಹಾರ ಲೇಔಟ್ನ ಹರಿಹರೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ರಮ್ಯಾ(22) ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಯ ತಾಯಿ ಸುಜಾತ ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ನಲ್ಲಿ ಪತಿಯೊಂದಿಗೆ ವಾಸವಿದ್ದ ರಮ್ಯಾ ಆಗಾಗ್ಗೆ ತವರು ಮನೆಗೆ ಬರುತ್ತಿದ್ದಳು. ತಾಯಿ-ಮಗಳು ಇಬ್ಬರೂ ಸದಾ ಹರಿಹರೇಶ್ವರ ದೇವಾಲಯಕ್ಕೆ ಪೂಜೆಗೆಂದು ಬರುತ್ತಿದ್ದರು. ಅದೇ ರೀತಿ ನ.19ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನದ ಬಳಿ ತಾಯಿ ಮಗಳು ಬಂದಿದ್ದರು ಎನ್ನಲಾಗಿದೆ.
ದೇವರಿಗೆ ತಲೆಭಾಗಿ ನಮಸ್ಕರಿಸುತ್ತಿದ್ದ ವೇಳೆ ಮಗಳು ರಮ್ಯಾಳ ಮೇಲೆ ಸುಜಾತಾ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರಮ್ಯಾಳನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ-ಮಗಳು ದೇವಸ್ಥಾನಕ್ಕೆ ಬರುವಾಗಲೇ ಮಚ್ಚು ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸದ್ಯ ಸುಜಾತಾ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ. ತಿಳಿಸಿದ್ದಾರೆ.







