Bengaluru | ಪೊಲೀಸರ ಸೋಗಿನಲ್ಲಿ ಯುವತಿಯ ಕೊಠಡಿಗೆ ನುಗ್ಗಿ ಸುಲಿಗೆ; 6 ಮಂದಿ ಸೆರೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಪೊಲೀಸರ ಸೋಗಿನಲ್ಲಿ ಯುವತಿಯೊಬ್ಬಳ ಕೊಠಡಿಗೆ ನುಗ್ಗಿ ಸುಲಿಗೆ ಮಾಡಿದ ಪ್ರಕರಣದಡಿ 6 ಮಂದಿ ಆರೋಪಿಗಳನ್ನು ಎಚ್ಎಎಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮುಹಮ್ಮದ್ ನಜಾಶ್(24), ಸರುಣ್(38), ಬೆಂಗಳೂರಿನ ವಿಷ್ಣು ಕೆ.ಟಿ.(23), ದಿವಾಕರ್(34), ಮಧುಕುಮಾರ್(32) ಹಾಗೂ ಕಿರಣ್(29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ದೂರಿನ ವಿವರ: ನವೆಂಬರ್ 7ರಂದು ರಾತ್ರಿ ಮಾರತ್ ಹಳ್ಳಿಯ ಕೊಠಡಿಯೊಂದಕ್ಕೆ ನುಗ್ಗಿದ್ದ ಆರೋಪಿಗಳು, ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ದೂರುದಾರ ಯುವತಿಗೆ ಟೀ ಅಂಗಡಿಯೊಂದರಲ್ಲಿ ಮುಹಮ್ಮದ್ ನಜಾಶ್ ಪರಿಚಯವಾಗಿತ್ತು. ನವೆಂಬರ್ 7ರಂದು ಆತನ ಹುಟ್ಟುಹಬ್ಬ ಇದ್ದಿದ್ದರಿಂದ ಆಚರಿಸಲು ದೂರುದಾರ ಯುವತಿ ತನ್ನ ಕೊಠಡಿಗೆ ಆಹ್ವಾನಿಸಿದ್ದಳು. ಅದರಂತೆ ಯುವತಿಯ ಕೊಠಡಿಗೆ ನಜಾಶ್ ತೆರಳಿದ್ದ.
ಮನೆಯಲ್ಲಿದ್ದಾಗ ರಾತ್ರಿ 2 ಗಂಟೆಗೆ ಆರೋಪಿಗಳು ಬಾಗಿಲು ತಟ್ಟಿದ್ದರು. ಬಾಗಿಲು ತೆರೆಯುತ್ತಿದ್ದಂತೆ ತಾವು ಪೊಲೀಸರು ಎಂದು ಹೇಳುತ್ತ ಬೆದರಿಸಿದ್ದ ಆರೋಪಿಗಳು, ಮನೆಯಲ್ಲಿದ್ದ ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡಿದ್ದರು. ಬಳಿಕ 5 ಲಕ್ಷ ಹಣ ನೀಡದಿದ್ದರೆ ಮತ್ತೊಮ್ಮೆ ಬರುವುದಾಗಿ ಬೆದರಿಸಿ ಪರಾರಿಯಾಗಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ, ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಾಗ ಕೃತ್ಯದಲ್ಲಿ ಯುವತಿಯ ಪರಿಚಿತ ನಜಾಶ್ನ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಪೈಕಿ ಸರುಣ್ ಈ ಹಿಂದೊಮ್ಮೆ ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಸದ್ಯ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







