ಬೆಂಗಳೂರು | ಉದ್ಯಮಿ ಅಪಹರಿಸಿ ಸುಲಿಗೆ ಪ್ರಕರಣ; ರೌಡಿಶೀಟರ್ ಬೇಕರಿ ರಘು ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ರಾಘವೇಂದ್ರ ಯಾನೆ ಬೇಕರಿ ರಘುನನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೋಕಾ)ಯಡಿ ರಘುನನ್ನು ಬಂಧಿಸಲಾಗಿದೆ. ಉದ್ಯಮಿ ಎಚ್.ವಿ.ಮನೋಜ್ ಎಂಬವರನ್ನು ಅಪಹರಿಸಿ ಬೆದರಿಸಿದ್ದ ಆರೋಪದಡಿ 2025ರ ಆಗಸ್ಟ್ನಲ್ಲಿ ರಾಜೇಶ್ ಯಾನೆ ಅಪ್ಪಿ, ಸೀನಾ ಯಾನೆ ಬಾಂಬೆ ಸೀನ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಬೇಕರಿ ರಘು ಕೈವಾಡವಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಆತನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಉದ್ಯಮಿ ಎಚ್.ವಿ.ಮನೋಜ್ ಅವರಿಗೆ ಪರಿಚಿತನಾಗಿದ್ದ ರಾಜೇಶ್, ಸಿನೆಮಾ ನಿರ್ದೇಶಕರೊಬ್ಬರಿಗೆ 1.20 ಲಕ್ಷ ರೂಪಾಯಿ ಸಾಲ ಕೊಡಿಸಿದ್ದ. ಆದರೆ, ಒಂದು ವರ್ಷ ಕಳೆದರೂ ಸಾಲದ ಹಣವನ್ನು ನಿರ್ದೇಶಕ ಹಿಂತಿರುಗಿಸದಿದ್ದಾಗ ರಾಜೇಶ್ ಮೇಲೆ ಎಚ್.ವಿ.ಮನೋಜ್ ಒತ್ತಡ ಹೇರಿದ್ದರು. ಆ.26ರಂದು ಸಂಜೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್ಗೆ ಎಚ್.ವಿ.ಮನೋಜ್ ಅವರನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ ದೊಡ್ಡವರು ಹಣ ಕೊಡು ತ್ತಾರೆ ಎಂದು ಕಾರಿಗೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಮಾರ್ಗ ಮಧ್ಯೆ ಎಚ್.ವಿ.ಮನೋಜ್ ಅವರನ್ನು ಮತ್ತೊಂದು ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು ಎಂದು ಉದ್ಯಮಿ ಎಚ್.ವಿ.ಮನೋಜ್ ದೂರು ದಾಖಲಿಸಿದ್ದರು.
ಅಲ್ಲದೇ, ಡ್ಯಾಗರ್ ತೋರಿಸಿ, ಬೆದರಿಸಿ ಮನೋಜ್ ಅವರ ಎರಡು ಖಾತೆಗಳಿಂದ ಒಟ್ಟು 2.96 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ನಂತರವೂ 10 ಲಕ್ಷ ರೂ. ಕೊಡುವಂತೆ ಬೆದರಿಸಿದ್ದರು. ಹಣ ನೀಡುವುದಾಗಿ ಮನೋಜ್ ಒಪ್ಪಿಕೊಂಡ ಬಳಿಕ ಮಾರನೇ ದಿನ ಮಧ್ಯಾಹ್ನ ಅವರನ್ನು ಜ್ಞಾನಭಾರತಿ ಕ್ಯಾಂಪಸ್ ಬಳಿ ಕಾರಿನಿಂದ ಇಳಿಸಿ ಹೊರಟು ಹೋಗಿದ್ದರು. ಬಳಿಕ ಸಿಸಿಬಿ ಪೊಲೀಸರಿಗೆ ಮನೋಜ್ ದೂರು ನೀಡಿದ್ದರು.
ಆರೋಪಿ ಬೇಕರಿ ರಘು ವಿರುದ್ಧ ಬೆಂಗಳೂರಿನ 10 ಠಾಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳಿದ್ದವು. ನ.25ರ ಮಂಗಳವಾರ ಮಂಡ್ಯದ ಎನ್.ಎಸ್.ಡಾಬಾ ಬಳಿ ಆತನನ್ನು ಬಂಧಿಸಲಾಗಿದೆ. ಬಂಧನಕ್ಕೆ ತೆರಳಿದ್ದಾಗ ಮಹಿಳೆಯೊಬ್ಬರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅವರ ವಿರುದ್ಧ ಮಂಡ್ಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-ಶ್ರೀಹರಿಬಾಬು ಬಿ.ಎಲ್., ಸಿಸಿಬಿ ಡಿಸಿಪಿ







