ಸರಕಾರಿ ಆಯುಷ್ ಆಸ್ಪತ್ರೆಗಳಿಗೆ ದಾನಿಗಳು ಸೂಚಿಸಿರುವ ಹೆಸರು ನಾಮಕರಣ : ಆದೇಶ

ಬೆಂಗಳೂರು : ಆಯುಷ್ ಇಲಾಖೆಯ ವ್ಯಾಪ್ತಿಗೆ ಬರುವ ಆಯುಷ್ ಆಸ್ಪತ್ರೆಗಳಿಗೆ, ಚಿಕಿತ್ಸಾಲಯಗಳಿಗೆ ದಾನಿಗಳ ಅಥವಾ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರ, ತಾಲ್ಲೂಕು ಆಯುಷ್ ಆಸ್ಪತ್ರೆ 2 ಎಕರೆ ಹಾಗೂ ಜಿಲ್ಲ ಆಯುಷ್ ಆಸ್ಪತ್ರೆ 4 ಎಕರೆ ಜಮೀನನ್ನು ದಾನ ನೀಡಿದ್ದಲ್ಲಿ, ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ಆಸ್ಪತ್ರೆಗಳಿಗೆ, ಕೇಂದ್ರಗಳಿಗೆ ನಾಮಕರಣ ಮಾಡಲಾಗುವುದು ಎಂದು ತಿಳಿಸಿದೆ.
ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆ, ಕೇಂದ್ರಗಳಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲು ಕಟ್ಟಡದ ಅಂದಾಜು ಮೌಲ್ಯದ ಅರ್ಧ ಭಾಗ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕನೆ ಒಂದು ಭಾಗದಷ್ಟು ಕಟ್ಟಡದ ಅಂದಾಜು ಮೌಲ್ಯದ ಮೊತ್ತವನ್ನು ದಾನವಾಗಿ ನೀಡಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಆಸ್ಪತ್ರೆಯ ಒಂದು ವಾರ್ಡ್/ರೂಮ್ ನಿರ್ಮಿಸಲು ಪೂರ್ಣ ಮೊತ್ತವನ್ನು ದಾನವಾಗಿ ನೀಡಿದ್ದಲ್ಲಿ, ವಾರ್ಡ್/ರೂಮ್‍ಗೆ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲಾಗುವುದು. ಉಪಕರಣಗಳನ್ನು ನೀಡಿದ್ದಲ್ಲಿ, ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು ಎಂದು ತಿಳಿಸಿದೆ.
ದಾನಿಗಳು 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದಲ್ಲಿ ಆಸ್ಪತ್ರೆಯ ನಾಮಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸಲಾಗುವುದು. ಸ್ವೀಕರಿಸಿದ ದಾನ, ಆಸ್ಪತ್ರೆಗಳಿಗೆ ದಾನಿಗಳು ಸೂಚಿಸುವ ಹೆಸರನ್ನು ನಾಮಕರಣ ಮಾಡಲು ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ಸ್ವೀಕರಿಸಿದ ದಾನವನ್ನು ಯಾವುದೇ ಕಾರಣಕ್ಕಾಗಿ ಹಿಂದಿರುಗಿಸುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.







