Bengaluru | ಒಂಟಿ ಮಹಿಳೆಯರನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ನಗರದ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣೆ poಲೀಸರು ಬಂಧಿಸಿದ್ದಾರೆ. ಹರೋಹಳ್ಳಿಯ ಮಾದೇಶ್ವರನಗರ ನಿವಾಸಿ ವಿನೋದ್(27) ಬಂಧಿತ ಆರೋಪಿ.
ಸುಮ್ಮನಹಳ್ಳಿ ಜಂಕ್ಷನ್ ಮುಖಾಂತರ ಶ್ರೀನಿವಾಸನಗರ ಸರ್ಕಲ್ ಕಡೆಯಿಂದ ಮಹಿಳೆಯೊಬ್ಬರು ಪೀಣ್ಯ ಜಿಕೆಡಬ್ಲೂ ಲೇಔಟ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ರಸ್ತೆ ಗುಂಡಿಯಿದ್ದ ಕಾರಣ ವಾಹನವನ್ನು ನಿಧಾನ ಮಾಡಿದಾಗ ಈತ ಹಿಂಬಾಲಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಅವರನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಹಿಂದೆ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಗಮನಿಸಿ ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ. ಬಳಿಕ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿದ್ದಾರೆ. ಹೊಯ್ಸಳ ಪೊಲೀಸರು ತಕ್ಷ ಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡು ವಿಕೃತ ಕಾಮಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಈ ವಿಕೃತ ಕಾಮಿ ಸಂಜೆಯಾಗುತ್ತಿದ್ದಂತೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.







