Bengaluru | ಪಾನಿಪುರಿ ನೀಡಲು ನಿರಾಕರಿಸಿದ್ದಕ್ಕೆ ವ್ಯಾಪಾರಿಗೆ ಚಾಕು ಇರಿತ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಇಲ್ಲಿನ ಬ್ಯಾಟರಾಯನಪುರದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ, ಉಚಿತವಾಗಿ ಪಾನಿಪುರಿ ನೀಡಲು ನಿರಾಕರಿಸಿದ್ದಕ್ಕೆ ರಸ್ತೆಬದಿ ವ್ಯಾಪಾರಿಯೊಬ್ಬನಿಗೆ ಚಾಕು ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ ಬ್ಯಾಟರಾಯನಪುರ ಮುಖ್ಯ ರಸ್ತೆಯಲ್ಲಿರುವ ಪಾನಿಪುರಿ ಅಂಗಡಿಯಲ್ಲಿ ಗುರುವಾರ ರಾತ್ರಿ ಸುಮಾರು 10.30ರ ವೇಳೆಗೆ ಘಟನೆ ನಡೆದಿದೆ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವ ಅಂಗಡಿಗೆ ಬಂದಿದ್ದು, ಉಚಿತವಾಗಿ ತನಗೆ ಪಾನಿಪುರಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೆ ತನ್ನ ದೈನಂದಿನ ಜೀವನಕ್ಕೆ ಇದೇ ವ್ಯಾಪಾರ ನಂಬಿಕೊಂಡಿದ್ದ ವ್ಯಾಪಾರಿ, ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಇದೇ ವಿಚಾರಕ್ಕೆ ವಾಗ್ವಾದ ಆರಂಭವಾಗಿದ್ದು, ಈ ವೇಳೆ ಏಕಾಏಕಿ ಆರೋಪಿ ಚಾಕು ತೆಗೆದು ವ್ಯಾಪಾರಿಯ ಹೊಟ್ಟೆಯ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದಾನೆ. ಅಂಗಡಿಯ ಬಳಿಯೇ ವ್ಯಾಪಾರಿ ಬಿದ್ದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಂಭೀರ ಗಾಯದ ಹೊರತಾಗಿಯೂ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.





