Bengaluru | ಅನುಮಾನಾಸ್ಪದವಾಗಿ ಯುವತಿ ಸಾವು!

ಬೆಂಗಳೂರು : ಅನುಮಾನಾಸ್ಪದವಾಗಿ ಯುವತಿ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ರಮಣ್ಯ ಲೇಔಟ್‍ನಲ್ಲಿ ವರದಿಯಾಗಿದೆ.
ಮಂಗಳೂರು ಮೂಲದ ಶರ್ಮಿಳಾ(34) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಜನವರಿ 3ರಂದು ತಾನು ವಾಸವಾಗಿದ್ದ ಮನೆಯಲ್ಲಿ ಶರ್ಮಿಳಾ ಮೃತದೇಹ ಪತ್ತೆಯಾಗಿದೆ. ಅದೇ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಶರ್ಮಿಳಾ ಕೆಲಸ ನಿರ್ವಹಿಸುತ್ತಿದ್ದರು. ಜನವರಿ 3ರಂದು ರಾತ್ರಿ 10:30ರ ಸುಮಾರಿಗೆ ಶರ್ಮಿಳಾ ವಾಸವಿದ್ದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದನ್ನು ಗಮನಿಸಿದ್ದ ಮನೆ ಮಾಲಕ ವಿಜಯೇಂದ್ರ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಕೆಲ ನಿಮಿಷಗಳಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಸೋಫಾ, ಕರ್ಟನ್, ಬೆಡ್ ಸುಟ್ಟು ಕರಕಲಾಗಿದ್ದು, ಶರ್ಮಿಳಾ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡು ಬಂದಿದೆ. ಬೆಂಕಿ ನಂದಿಸಿದ್ದ ಪೊಲೀಸರು ತಕ್ಷಣ ಶರ್ಮಿಳಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಠಾಣೆ ಪೊಲೀಸರು, ಮನೆಯಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.







