Bengaluru | ಕೆಎಂಎಫ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 50 ಲಕ್ಷ ರೂ.ಪಡೆದು ವಂಚನೆ ಆರೋಪ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳದಲ್ಲಿ(ಕೆಎಂಎಫ್) ಕೆಲಸ ಕೊಡಿಸುವುದಾಗಿ ನಂಬಿಸಿ 10 ಮಂದಿಯಿಂದ 50 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ಇಬ್ಬರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಆರ್.ಟಿ.ನಗರದ ನಿವಾಸಿ ಕರೀಗೌಡ ಪಾಟೀಲ ಅವರು ನೀಡಿರುವ ದೂರಿನ ಮೇರೆಗೆ ಎನ್.ಕೃಷ್ಣನ್, ನಾಗರಾಜ್ ಎಂಬುವರ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘2022ರಲ್ಲಿ ಮಲ್ಲೇಶ್ವರ ಹೋಟೆಲ್‍ವೊಂದರಲ್ಲಿ ಗೋಪಿ ಎಂಬುವವರು ಎನ್.ಕೃಷ್ಣನ್ ಅವರನ್ನು ಪರಿಚಯಿಸಿದ್ದರು. ಕೃಷ್ಣನ್ ಅವರು ತಾನು ಕೆಎಎಸ್ ಅಧಿಕಾರಿಯಾಗಿದ್ದು, ಕೆಎಂಎಫ್‍ನಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ನಾಗರಾಜ್ ಸಹ, ತಾನು ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿ ನಕಲಿ ಗುರುತಿನ ಚೀಟಿ ತೋರಿಸಿದ್ದರು. ಕೆಎಂಎಫ್‍ನಲ್ಲಿ 25 ಸರಕಾರಿ ಹುದ್ದೆಗಳಿದ್ದು, ಉದ್ಯೋಗಿಗಳ ಆಯ್ಕೆ ಅಧಿಕಾರ ನಮಗಿದೆ. ಆಯ್ಕೆ ಮಾಡಲು ಪರೀಕ್ಷೆ ಅಥವಾ ಸಂದರ್ಶನದ ಅಗತ್ಯ ಇಲ್ಲ. ಪ್ರತಿ ಅಭ್ಯರ್ಥಿ 10 ಲಕ್ಷ ರೂ. ಸರಕಾರಿ ಶುಲ್ಕ ಪಾವತಿಸಿದರೆ ಮೂರು ತಿಂಗಳಲ್ಲಿ ನೇಮಕಾತಿ ಪತ್ರ ನೀಡಲಾಗುವುದು ಎಂಬುದಾಗಿ ನಂಬಿಸಿದ್ದರು’ ಎಂದು ಕರೀಗೌಡ ಪಾಟೀಲ ಆರೋಪಿಸಿದ್ದಾರೆ.
‘10 ಅಭ್ಯರ್ಥಿಗಳ ಜತೆಗೆ ಆರೋಪಿಗಳು ಮಾತುಕತೆ ನಡೆಸಿದ್ದರು. 2022ರ ಡಿಸೆಂಬರ್‍ನಿಂದ 2023ರ ಡಿಸೆಂಬರ್‌ವರೆಗೆ ಬ್ಯಾಂಕ್ ವರ್ಗಾವಣೆಯ ಮೂಲಕ 36 ಲಕ್ಷ ರೂ. ಹಾಗೂ ನಗದು ರೂಪದಲ್ಲಿ 14 ಲಕ್ಷ ರೂ.ಗಳನ್ನು ಆರೋಪಿಗಳಿಗೆ ನೀಡಲಾಗಿತ್ತು. 2024ರ ಮಾರ್ಚ್‍ನಲ್ಲಿ ಅಭ್ಯರ್ಥಿಗಳು ಹಾಗೂ ಆರೋಪಿಗಳು ಒಪ್ಪಂದದ ಪತ್ರ ಮಾಡಿಕೊಂಡಿದ್ದರು. ಹಣ ಪಾವತಿಸಿದ ವಿವರ ಹಾಗೂ ಕೆಲಸ ಸಿಗದಿದ್ದರೆ ಹಣವನ್ನು ವಾಪಸ್ ಕೊಡುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೇ ಆರೋಪಿಗಳು, ಅಭ್ಯರ್ಥಿಗಳಿಗೆ ಚೆಕ್ ಸಹ ನೀಡಿದ್ದರು. ಕೆಲವು ದಿನಗಳ ನಂತರ ಮೈಸೂರಿನಲ್ಲಿ ಸಂದರ್ಶನ ನಡೆಯಲಿದೆ ಎಂದು ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಸಂದೇಶ ಕಳಹಿಸಲಾಗಿತ್ತು. ಅದಾದ ಮೇಲೆ ಕೆಲಸವನ್ನು ನೀಡಿಲ್ಲ ಎಂದು ಕರೀಗೌಡ ಪಾಟೀಲ ದೂರಿನಲ್ಲಿ ಉಲ್ಲೇಖಿಸಿದ್ದಾರೆ.







