Bengaluru | ಬಿಡಿಎ ಕಾರ್ಯಾಚರಣೆ: ಸುಮಾರು 80 ಕೋಟಿ ರೂ.ಗಳ ಆಸ್ತಿ ವಶ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಗುರುವಾರದಂದು ನಡೆದ ಕಾರ್ಯಾಚರಣೆಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಸುಮಾರು 80 ಕೋಟಿ ರೂ. ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರ ಹೋಬಳಿ, ಥಣಿಸಂದ್ರ ಗ್ರಾಮದ ಸರ್ವೆ ನಂ. 28/1 ಮತ್ತು 28/2ರಲ್ಲಿ 2 ಎಕರೆ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್‍ಗಳನ್ನು ತೆರವುಗೊಳಿಸಿ, ಸುಮಾರು 80 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು.
ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-3, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು ಎಂದು ಬಿಡಿಎ ಪ್ರಕಟನೆಯಲ್ಲಿ ತಿಳಿಸಿದೆ.
Next Story





