Bengaluru | ರೈಲು ಹರಿದು ಕೈ ತುಂಡಾದರೂ ಗಾಂಜಾ ಮತ್ತಿನಲ್ಲಿ ಆಸ್ಪತ್ರೆಗೆ ತೆರಳದ ಯುವಕ; ಹರಸಾಹಸಪಟ್ಟು ಚಿಕಿತ್ಸೆ ಕೊಡಿಸಿದ ಪೊಲೀಸರು

ಬೆಂಗಳೂರು : ಗಾಂಜಾ ಮತ್ತಿನಲ್ಲಿ ರೈಲು ಹರಿದು ಕೈ ತುಂಡಾದರೂ ಅದರ ಪರಿವೆಯೇ ಇಲ್ಲದೆ ಅಡ್ಡಾಡುತ್ತಿದ್ದ ಯುವಕನನ್ನು ಪೊಲೀಸರು ಹರಸಾಹಸಪಟ್ಟು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಘಟನೆ ದೇವನಹಳ್ಳಿಯಲ್ಲಿ ವರದಿಯಾಗಿದೆ.
ದೇವನಹಳ್ಳಿ ಪಟ್ಟಣದ ಕುಂಬಾರ ಬೀದಿಯಲ್ಲಿ ಜ.7ರ ತಡರಾತ್ರಿ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ದಿಲೀಪ್ ಎಂದು ಗುರುತಿಸಲಾಗಿದೆ. ರೈಲು ಹರಿದು ಈತನ ಎಡಗೈ ಎರಡು ತುಂಡಾಗಿದೆ.
ಗಾಂಜಾ ಮತ್ತಿನಲ್ಲಿ ರಾತ್ರಿ ರೈಲ್ವೇ ಹಳಿಯ ಮೇಲೆ ಬಿದ್ದಿದ್ದ ದಿಲೀಪ್ ಕೈ ಮೇಲೆ ರೈಲು ಹರಿದಿದೆ. ಪರಿಣಾಮ ಕೈ ಮುರಿದು ಎರಡು ಭಾಗಗಳಾಗಿವೆ. ಆದರೆ, ಇದರ ಪರಿವೆಯೇ ಇಲ್ಲದೆ ಬೀದಿಯಲ್ಲಿ ಈತ ನಡೆದಾಡುತ್ತಿದ್ದ ಎಂದು ತಿಳಿದುಬಂದಿದೆ.
ಈ ವೇಳೆ ದಿಲೀಪ್‍ನನ್ನು ನೋಡಿದ ಸ್ಥಳೀಯರು, ಆತನನ್ನು ಆಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆಗ ಆತ ರಸ್ತೆ ಮಧ್ಯೆಯೇ ಆಂಬ್ಯುಲೆನ್ಸ್ ನಿಂದ ಜಿಗಿದು ಓಡಿ ಹೋಗಿದ್ದ ಎನ್ನಲಾಗಿದೆ. ದೇವನಹಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ತಪ್ಪಿಸಿಕೊಂಡು ಬಳಿಕ ಕುಂಬಾರ ಬೀದಿಯ ಮನೆಗಳನ್ನು ಸೇರಿಕೊಂಡಿದ್ದ. ನಂತರ ದೇವನಹಳ್ಳಿ ಪೊಲೀಸರು 1 ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಹುಡುಕಿ, ಬಳಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.





