Bengaluru | ಯುವತಿಯಿಂದ 2ಲಕ್ಷ ರೂ.ಸುಲಿಗೆ; ಗುರೂಜಿ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು : ಮದುವೆಯಾಗಲು ಪೂಜೆ ಮಾಡಬೇಕು ಎಂಬ ನೆಪವೊಡ್ಡಿ ಯುವತಿಯಿಂದ 2 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ ಆರೋಪದಡಿ ಗುರೂಜಿ ವಿರುದ್ಧ ಇಲ್ಲಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
21 ವರ್ಷದ ಯುವತಿ ನೀಡಿದ ದೂರಿನನ್ವಯ ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡುಗೋಡಿಯ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ ಯುವತಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2025ರ ಡಿಸೆಂಬರ್‍ನಲ್ಲಿ ಇನ್‍ಸ್ಟಾಗ್ರಾಂ ನೋಡುವಾಗ ‘ಚಂದ್ರಶೇಖರ್ ಸುಗತ್ ಗುರೂಜಿಯಿಂದ ಎಲ್ಲಾ ಕಷ್ಟಗಳನ್ನು ಪರಿಹರಿಸಲಾಗುವುದು’ ಎಂಬ ಜಾಹೀರಾತು ನೋಡಿ ಪ್ರೇರಿತಗೊಂಡಿದ್ದರು. ಅನಂತರ ಮೊಬೈಲ್ ಸಂಖ್ಯೆ ಪಡೆದು ಗುರೂಜಿಗೆ ಕರೆ ಮಾಡಿ ತನಗೆ ಮದುವೆಯಾಗಲಿದೆಯಾ ಎಂದು ಪ್ರಶ್ನಿಸಿದ್ದಳು. ಇದಕ್ಕೆ ಉತ್ತರಿಸಿದ ಗುರೂಜಿ, ಮದುವೆಯಾಗಲಿದೆ. ಆದರೆ, ಹಣ ಖರ್ಚಾಗಲಿದೆ ಎಂದು ಹೇಳಿದ್ದರು. ಅದರಂತೆ ಆತನ ಮಾತನ್ನು ನಂಬಿ ಹಂತ-ಹಂತವಾಗಿ 2 ಲಕ್ಷ ರೂ.ವರೆಗೆ ಹಣ ನೀಡಿದ್ದಾಳೆ. ಆತ ಹೇಳಿದಂತೆ ಪೂಜೆ ಮಾಡಿದ್ದಾಳೆ. ಆದರೆ, ಮದುವೆಯಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದ ಗುರೂಜಿ, ಮರಳಿ ಹಣ ನೀಡದೆ ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಚಂದ್ರಶೇಖರ್ ಸುಗತ್ ಗುರೂಜಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





