Bengaluru | ದಂಪತಿಗೆ ಚಾಕು ತೋರಿಸಿ 1 ಲಕ್ಷ ರೂ.ಸುಲಿಗೆ; ಮೂವರ ಬಂಧನ

ಸಾಂದರ್ಭಿಕ ಚಿತ್ರ | PC: freepik
ಬೆಂಗಳೂರು : ಆಟೋರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ಅವರ ಬಳಿಯಿದ್ದ 1 ಲಕ್ಷ ರೂ.ನಗದು ಹಾಗೂ ಚಿನ್ನದುಂಗುರ ದೋಚಿ ಪರಾರಿಯಾಗಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿಯ ವಲಗೇರಹಳ್ಳಿ ನಿವಾಸಿ ಸಿದ್ದಗಂಗಯ್ಯ ಎಂಬುವರು ನೀಡಿದ ದೂರಿನನ್ವಯ ಆರೋಪಿಗಳಾದ ಸುರೇಶ್, ಶಶಿಕುಮಾರ್ ಹಾಗೂ ಅಖಿಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.22ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಗಳ ಮನೆಗೆ ಆಟೋದಲ್ಲಿ ಹೋಗುವಾಗ ಮಾರ್ಗ ಮಧ್ಯೆ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿದ್ದರು. ಈ ವೇಳೆ, ದೂರುದಾರರ ಪತ್ನಿ ವ್ಯಾನಿಟಿ ಬ್ಯಾಗ್ನಲ್ಲಿದ್ದ 1 ಲಕ್ಷ ರೂ. ನಗದು ಹಾಗೂ ಎರಡೂವರೆ ಗ್ರಾಂ ಚಿನ್ನದುಂಗುರವನ್ನು ಸುಲಿಗೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ವಿರುದ್ಧ ಹಿಂದೆಯೇ ಕೊಲೆ, ದರೋಡೆ, ಹಲ್ಲೆ, ಕಳ್ಳತನ, ಸುಲಿಗೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿವೆ. ಬಂಧಿತರ ಪೈಕಿ ಅಖಿಲ್, ಅಪರಾಧ ಕೃತ್ಯವೆಸಗುವಾಗ ಅಪ್ರಾಪ್ತನಾಗಿದ್ದರಿಂದ ಬಾಲಮಂದಿರದ ಸುಪರ್ದಿಗೆ ಪೊಲೀಸರು ಒಪ್ಪಿಸಿದ್ದರು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಇನ್ನಿತರ ಆರೋಪಿಗಳೊಂದಿಗೆ ಸೇರಿಕೊಂಡು ಮತ್ತೆ ಅಪರಾಧ ಕೃತ್ಯ ಎಸಗುವ ಪ್ರವೃತ್ತಿ ಮುಂದುವರೆಸಿದ್ದ ಎನ್ನಲಾಗಿದೆ.
ಸದ್ಯ, ಈ ಮೂವರು ಆರೋಪಿಗಳು ಕೆಂಗೇರಿ, ಮಾದನಾಯಕನಹಳ್ಳಿ, ಪೀಣ್ಯ, ನಂದಿನಿ ಲೇಔಟ್, ಹಲಸೂರು, ಬ್ಯಾಡರಹಳ್ಳಿ ಹಾಗೂ ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸುಲಿಗೆ ಹಾಗೂ ಕಳ್ಳತನ ಮಾಡಿದ್ದ 10 ಲಕ್ಷ ರೂ. ಮೌಲ್ಯದ ಎರಡು ಆಟೋ, ಮೂರು ದ್ವಿಚಕ್ರ ವಾಹನ, ಬೆಳ್ಳಿಯ ಸರ, ಕಡಗಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.







