Bengaluru | ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ: ಜ್ಯುವೆಲ್ಲರಿ ಅಂಗಡಿ ಮಾಲಕ ಮೃತ್ಯು

ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಜ್ಯುವೆಲ್ಲರಿ ಅಂಗಡಿ ಮಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.
ನಗರತ್‍ಪೇಟೆ ನಿವಾಸಿ ಪಾರಸ್ಮಲ್ ಪಿ. ಜೈನ್(70) ಮೃತಪಟ್ಟ ಜ್ಯುವೆಲ್ಲರಿ ಅಂಗಡಿ ಮಾಲಕ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಪಾರಸ್ಮಲ್ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನೃಪತುಂಗ ರಸ್ತೆಯ ಕೆ.ಆರ್.ಸರ್ಕಲ್ ಸಮೀಪದ ಬಸ್ ನಿಲ್ದಾಣದ ಬಳಿ ಅತೀ ವೇಗವಾಗಿ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಿಂದ ಬಿದ್ದ ಪಾರಸ್ಮಲ್ ಅವರು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಈ ಸುದ್ದಿ ತಿಳಿದು ಹಲಸೂರು ಗೇಟ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





