Bengaluru | ದಂಪತಿ ಜಗಳ: 4 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!

ಬೆಂಗಳೂರು : ಗಂಡನ ವರ್ತನೆಗೆ ಬೇಸತ್ತ ಹೆಂಡತಿಯೊಬ್ಬಳು ತನ್ನ ಮಗಳನ್ನು ಬೆಂಕಿಹಚ್ಚಿ ಹತ್ಯೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜ.15ರ ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದ್ದು, ನೇಪಾಳ ಮೂಲದ ತಾಯಿ ಸೀತಾ ಯಾನೆ ಮನೀಷಾ(29), ಮಗಳು ಸೃಷ್ಟಿ(4) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನೇಪಾಳ ಮೂಲದ ಗೋವಿಂದ ಬಹದ್ದೂರು ಮತ್ತು ಸೀತಾ ದಂಪತಿಗೆ ಸೃಷ್ಠಿ ಎಂಬ ನಾಲ್ಕು ವರ್ಷದ ಮಗಳಿದ್ದಳು. ಎಂಟು ತಿಂಗಳ ಹಿಂದೆಯಷ್ಟೇ ಈ ಕುಟುಂಬ ಬೆಂಗಳೂರಿಗೆ ಬಂದು ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಪ್ಪ ಗಾರ್ಡ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿವಾಗಿತ್ತು. ಕೆಲ ತಿಂಗಳ ಹಿಂದೆ ನೇಪಾಳಕ್ಕೆ ಹೋಗಿದ್ದ ಗಂಡ ಗೋವಿಂದ ಹಿಂತಿರುಗಿ ಬಂದಿರಲಿಲ್ಲ. ಮೊಬೈಲ್ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡರೂ ಆತ ಬಂದಿಲ್ಲ ಎನ್ನಲಾಗಿದೆ.
ಇದರಿಂದ ದಿಕ್ಕುತೋಚದಂತಾಗಿ ಒಂಟಿಯಾಗಿದ್ದ ಸೀತಾ ಮಗಳನ್ನು ಸಾಕಲು ಕಷ್ಟಪಡುತ್ತಿದ್ದಳು. ತಾನು ವಾಸವಿದ್ದ ಮನೆಯ ಸಮೀಪದಲ್ಲೇ ಮನೆಗೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಳು. ತನ್ನ ಕಷ್ಟವನ್ನು ಗಂಡನಿಗೆ ಕರೆ ಮಾಡಿ ಹೇಳಿದರೂ ಹೆಂಡತಿಯ ಮಾತಿಗೆ ಕಿವಿಗೊಡದೇ ಹಿಂತಿರುಗಿ ಬರಲು ನಿರಾಕರಿಸಿ ಜಗಳವಾಡಿದ್ದಾನೆ. ಇದೇ ವಿಚಾರಕ್ಕೆ ಆಗಾಗ್ಗೆ ಮೊಬೈಲ್‍ನಲ್ಲೇ ದಂಪತಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜ.15ರ ರಾತ್ರಿಯೂ ಸಹ ಗಂಡನ ಮೊಬೈಲ್‍ಗೆ ಕರೆ ಮಾಡಿ ವಾಪಸ್ ಬರುವಂತೆ ಅಂಗಲಾಚಿದರೂ ಆತ ಹೆಂಡತಿಗೆ ನಿಂದಿಸಿದ್ದಾನೆ. ಇದರಿಂದ ಮನನೊಂದ ಸೀತಾ ಪೆಟ್ರೋಲ್ ತೆಗೆದುಕೊಂಡು ಮನೆಗೆ ಬಂದು ಬಾಗಿಲು ಹಾಕಿಕೊಂಡಿದ್ದಾಳೆ. ರಾತ್ರಿ 8.30ರ ಸುಮಾರಿನಲ್ಲಿ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ನಂತರ ಆಕೆಯೂ ಸಹ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಈ ಬಗ್ಗೆ ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದು ನೋಡಿದಾಗ ತಾಯಿ-ಮಗಳು ಸಜೀವ ದಹನವಾಗಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮನೆಯನ್ನು ಪರಿಶೀಲಿಸಿ ಮಹಿಳೆಯ ಮೊಬೈಲ್ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಸದ್ಯ, ತಾಯಿ-ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







