Bengaluru | ಕ್ಷುಲಕ ಕಾರಣಕ್ಕೆ ಪತ್ನಿ, ಅತ್ತೆ, ಮಾವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಟೋ ಚಾಲಕ!

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಕ್ಷುಲಕ ಕಾರಣಕ್ಕೆ ಆಟೋ ಚಾಲಕನೊಬ್ಬ ಪತ್ನಿ ಹಾಗೂ ಅತ್ತೆ, ಮಾವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಇಲ್ಲಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಗಾಯಗೊಂಡಿರುವ ತರಬನಹಳ್ಳಿಯ ನಿವಾಸಿ ಸುಮಲತಾ(29) ಹಾಗೂ ಅವರ ತಂದೆ, ತಾಯಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪಾಂಡುರಂಗ ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಆಟೋ ಚಾಲಕ ಪಾಂಡುರಂಗ ಮತ್ತು ಸುಮಲತಾ ಇಬ್ಬರ ನಡುವೆ ಸ್ನೇಹ ಬೆಳೆದು ಮದುವೆಯಾಗಿ ಜೊತೆಯಾಗಿ ಜೀವನ ನಡೆಸುತ್ತಿದ್ದರು.
ಈ ನಡುವೆ ಕೌಟುಂಬಿಕ ಕಾರಣದಿಂದ ಸುಮಲತಾ ಪತಿಯ ಮನೆಯನ್ನು ತೊರೆದು ತರಬನಹಳ್ಳಿಯ ತನ್ನ ತವರು ಮನೆಗೆ ಹೋಗಿದ್ದರು. ಮಾ.6ರಂದು ಪಾಂಡುರಂಗ ಅವರ ಪತ್ನಿಯ ತವರು ಮನೆ ಬಳಿ ಹೋಗಿ ದ್ವಿಚಕ್ರ ವಾಹನವೊಂದನ್ನು ಕೊಡುವಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಸುಮಲತಾ ಹಾಗೂ ಆಕೆಯ ತಂದೆ-ತಾಯಿ ಮತ್ತು ಪಾಂಡುರಂಗ ನಡುವೆ ವಾಗ್ವಾದ ತಾರಕಕ್ಕೇರಿ ನಂತರ ಪಾಂಡುರಂಗ ಹೊರ ಹೋಗಿ ಪೆಟ್ರೋಲ್ ತಂದು ಮೂವರ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಅಕ್ಕಪಕ್ಕದ ಮನೆಯವರು ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದರು. ಈ ಬಗ್ಗೆ ಸುದ್ದಿ ತಿಳಿದು ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಪಾಂಡುರಂಗನನ್ನು ಬಂಧಿಸಿ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.







