Bengaluru | ಇಸ್ರೋದ ಕ್ಯಾಂಪಸ್ ಮೇಲೆ ಡ್ರೋನ್ ಹಾರಾಟ: ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಇಸ್ರೋದ ಕ್ಯಾಂಪಸ್ ಮೇಲೆ ಡ್ರೋನ್ ಹಾರಾಟ ನಡೆಸಿರುವ ಆರೋಪಿಗಳ ವಿರುದ್ಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಘಟನೆ ಸಂಬಂಧ ಸಿಐಎಸ್ಎಫ್ ಸಬ್ ಇನ್ಸ್ಪೆಕ್ಟರ್ ನೀಡಿರುವ ದೂರಿನನ್ವಯ ಭಾರತೀಯ ನ್ಯಾಯಸಂಹಿತೆ ಕಾಯ್ದೆ 329(3)- ಅಪರಾಧಿಕ ಅತಿಕ್ರಮಣ ಹಾಗೂ ಏರ್ ಕ್ರಾಫ್ಟ್ ಕಾಯ್ದೆ 11ಎ- ಅಧಿಕೃತ ಸುರಕ್ಷತಾ ನಿರ್ದೇಶನಗಳ ಉಲ್ಲಂಘನೆ ಆರೋಪದಡಿ ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೇ 2ರ ಬೆಳಗ್ಗೆ 8:16ರ ಸುಮಾರಿಗೆ ಕಾರ್ತಿಕ್ ನಗರದ ಇಸ್ರೋದ ಉಪಗ್ರಹ ಏಕೀಕರಣ ಮತ್ತು ಪರೀಕ್ಷಾ ಕೇಂದ್ರದ ಮೇಲೆ ಸುಮಾರು 80ರಿಂದ 100 ಅಡಿಗಳ ಮೇಲೆ 10-12 ಸೆಕೆಂಡ್ಗಳ ಕಾಲ ಅಪರಿಚಿತರು ಡ್ರೋನ್ ಹಾರಿಸಿರುವುದು ತಿಳಿದುಬಂದಿದೆ.
ಇಸ್ರೋದ ಕ್ಯಾಂಪಸ್ ಸೂಕ್ಷ್ಮ ಪ್ರದೇಶವಾಗಿದ್ದು, ನೋ-ಡ್ರೋನ್ ವಲಯವಾಗಿ ಗುರುತಿಸಲ್ಪಟ್ಟಿದೆ. ಅನುಮತಿಯಿಲ್ಲದೆ ವಾಯು ಚಟುವಟಿಕೆಗಳು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಆದ್ದರಿಂದ ನೋ-ಡ್ರೋನ್ ವಲಯದಲ್ಲಿ ಡ್ರೋನ್ ಹಾರಾಟ ಮಾಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.




