Bengaluru | ಹಿಟ್ ಅಂಡ್ ರನ್ : ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಬೆಂಗಳೂರು, ಮೇ 7: ಮುಂದೆ ಹೋಗುತ್ತಿದ್ದ ಕಾರು ಹಾಗೂ ಆಟೋರಿಕ್ಷಾಗೆ ಗುದ್ದಿ ಹಿಟ್ ಅಂಡ್ ರನ್ ಮಾಡಿದ್ದ ಟಾಟಾ ಕಂಟೈನರ್ ಲಾರಿಯ ಚಾಲಕನನ್ನು ಪೀಣ್ಯ ಸಂಚಾರ ಠಾಣೆಯ ಪೊಲೀಸರು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಕಾರು ಚಾಲಕ ಶ್ರೀನಿವಾಸ್ ಎಂಬುವರು ನೀಡಿದ ದೂರಿನ ಮೇರೆಗೆ ಪೀಣ್ಯ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಂಟೈನರ್ ಲಾರಿಯ ಚಾಲಕ ಮುನಿಮರ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಘಟನೆ ವಿವರ: ಮೇ 4ರಂದು ಬೆಳಗ್ಗೆ ಟಿ.ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿತ್ತು. ಲಾರಿ ಚಾಲಕ ರೆಹಮಾನ್, ದೂರುದಾರ ಶ್ರೀನಿವಾಸ್ ಅವರ ಕಾರು ಟಿ.ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಬರುವಾಗ ವೇಗವಾಗಿ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾನೆ. ಅಪಘಾತ ಸಂಬಂಧ ಶ್ರೀನಿವಾಸ್ ಹಾಗೂ ಲಾರಿ ಚಾಲಕನ ನಡುವೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿದ್ದು, ಚಾಲಕ ಹಿಟ್ ಅಂಡ್ ರನ್ ಮಾಡಿದ್ದ. ವಾಹನ ನಿಲ್ಲಿಸುವಂತೆ ಹೇಳಿದರೂ ಚಾಲಕ ಲಾರಿ ಚಾಲನೆ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಇತ್ತ, ಶ್ರೀನಿವಾಸ್ ಲಾರಿ ಬೆನ್ನಟ್ಟಿದ್ದು, ಸುಮಾರು 3 ಕಿ.ಮೀ.ವರೆಗೂ ಚೇಸ್ ಮಾಡಿದ್ದರು. ಕಾರಿನಲ್ಲಿದ್ದ ಪ್ರಯಾಣಿಕರು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ಕಂಡು ಗಾಬರಿಯಾದ ಚಾಲಕ ಲಾರಿಯನ್ನು ನಿಲ್ಲಿಸಿರಲಿಲ್ಲ. ಪೀಣ್ಯ ಜಂಕ್ಷನ್ ಬಳಿ ನಿಂತಿದ್ದ ಆಟೋಗೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಆಟೋ ಉರುಳಿಬಿದ್ದು, ಚಾಲಕ ಪ್ರಕಾಶ್ ಎಂಬುವರಿಗೆ ಕೈ-ಕಾಲು ಹಾಗೂ ಎದೆಗೆ ಪೆಟ್ಟಾಗಿತ್ತು. ಸ್ಥಳೀಯರ ನೆರವಿನಿಂದ ಜಾಲಹಳ್ಳಿ ಬಳಿ ಚಾಲಕ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದರು.






