Bengaluru | ನಿಯಮಬಾಹಿರ ಪೋಡಿ ಅಳತೆ: ಭೂ ಮಾಪಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು

ಬೆಂಗಳೂರು, ಮೇ 7: ಯಲಹಂಕ ತಾಲೂಕಿನ, ಕೋತಿಹೊಸಹಳ್ಳಿ ಗ್ರಾಮದ ಸ.ನ 13/1ರಲ್ಲಿ ಬಲರಾಮ್ ಎಂಬವರಿಗೆ 1.19 ಎಕರೆ ಜಮೀನನ್ನು ಅಕ್ರಮವಾಗಿ ಪೋಡಿ ಅಳತೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಪರವಾನಗಿ ಭೂ ಮಾಪಕ ಟಿ.ಕೆ.ಎಲ್. ಪ್ರಕಾಶ್ ಮತ್ತು ಅರ್ಜಿದಾರ ಬಲರಾಮ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ಯಲಹಂಕ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ತತ್ಕಾಲ್ ಪೋಡಿ ಅಳತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ ಬಲರಾಮ್ ಅವರೊಂದಿಗೆ ಅಕ್ರಮವಾಗಿ ಶಾಮೀಲಾಗಿ ಪ್ರಕಾಶ್, ಸ್ಥಳದಲ್ಲಿ ಬಿಬಿಎಂಪಿ ಕಟ್ಟಡ ಮತ್ತು ಆಟದ ಮೈದಾನವಿದ್ದರೂ ಅದನ್ನು ಪರಿಗಣಿಸಿರುವುದಿಲ್ಲ. ಅಲ್ಲದೆ, ಅಳತೆಯ ಜಮೀನು ಈ ಹಿಂದೆ ಬಿಡಿಎ ಬಡಾವಣೆ ನಕ್ಷೆ ಅನುಮೋದಿಸುವ ವೇಳೆ ಉದ್ಯಾನವನ(ಸಿಎ ನಿವೇಶನ)ಕ್ಕೆ 0-33ಗುಂಟೆ ಜಮೀನನ್ನು ಕಾಯ್ದಿರಿಸಿರುವುದನ್ನು ಪರಿಗಣಿಸದೆ ಭೂಮಾಪಕರು ಸ್ಥಳದಲ್ಲಿರುವ ಬಿಬಿಎಂಪಿ ಕಟ್ಟಡ ಮತ್ತು ಆಟದ ಮೈದಾನ ಸೇರಿದಂತೆ 1.19 ಎಕರೆ ಜಮೀನಿನ ನಕ್ಷೆ ತಯಾರಿಸಿರುತ್ತಾರೆ.
ಈ ಬಗ್ಗೆ ಬಿಡಿಎ ಸದರಿ ಸಿಎ ನಿವೇಶನಕ್ಕೆ ಕಾಯ್ದಿರಿಸಿದ ಪ್ರದೇಶವನ್ನು ಸಹಕಾರ ನಗರ ಕ್ಲಬ್‍ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಸದರಿ ಜಮೀನನ್ನೂ ಸೇರಿಸಿ ಅಕ್ರಮವಾಗಿ ಪೋಡಿ ಮಾಡಿರುವ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಇಲಾಖಾ ಅಧಿಕಾರಿಗಳೊಂದಿಗೆ 2026ರ ಎಪ್ರಿಲ್ 25ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಜಮೀನಿನ ವಸ್ತು ಸ್ಥಿತಿಯನ್ನು ಮರೆಮಾಚಿ, ಅಕ್ರಮವಾಗಿ ಅಳತೆ ಕಾರ್ಯ ಕೈಗೊಂಡಿರುವ ಪರವಾನಗಿ ಭೂ ಮಾಪಕ ಟಿ.ಕೆ.ಎಲ್. ಪ್ರಕಾಶ್ ಹಾಗೂ ತತ್ಕಾಲ್ ಪೋಡಿ ಕೋರಿ ಅರ್ಜಿ ಸಲ್ಲಿಸಿರುವ ಅರ್ಜಿದಾರ ಬಲರಾಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಯುಕ್ತರು ಸೂಚನೆ ನೀಡಿದ ಮೇರೆಗೆ, ಕೋಡಿಗೆಹಳ್ಳಿ ಪೋಲೀಸ್ ಠಾಣೆಯಲ್ಲಿ ದಿನಾಂಕ ಎಪ್ರಿಲ್ 28ರಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






