Bengaluru | ಪೊಲೀಸರ ವಶದಲ್ಲಿದ್ದ ಕೊಲೆ ಪ್ರಕರಣದ ಆರೋಪಿ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ8: ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಶುಕ್ರವಾರ ವರದಿಯಾಗಿದೆ.
ಶೇಷಾದ್ರಿಪುರ ನಿವಾಸಿ ಮಂಜುನಾಥ್ (36) ಯಾನೆ ಲೂಸ್ ಮಂಜ ಮೃತಪಟ್ಟ ಆರೋಪಿ ಎಂದು ಗುರುತಿಸಲಾಗಿದೆ.
ವೃದ್ಧೆ ವಿಜಯಲಕ್ಷ್ಮೀ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿ ಮಂಜುನಾಥ್ ಸೇರಿ ಐವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆರೋಪಿ ಮಂಜುನಾಥ್ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಕೂಡಲೇ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುವುದಾಗಿ ಅಧಿಕಾರಿ ಮೂಲಗಳು ತಿಳಿಸಿವೆ.
ವೃದ್ಧೆ ವಿಜಯಲಕ್ಷ್ಮೀ ಎಂಬುವರು ಒಂಟಿಯಾಗಿ ವಾಸವಿದ್ದರು. ಇವರ ಬಳಿ ಹಣ, ಚಿನ್ನಾಭರಣ ಇರುವುದನ್ನು ಅರಿತಿದ್ದ ಆರೋಪಿ ಮಂಜುನಾಥ್ ಸೇರಿ ಐವರು ಆರೋಪಿಗಳು ವೃದ್ಧೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಅದರಂತೆ ವೃದ್ಧೆ ವಿಜಯನಗರ ಪೊಲೀಸ್ ಠಾಣೆ ಬಳಿ ಬರುವಾಗ ದ್ವಿಚಕ್ರ ವಾಹನದಿಂದ ಗುದ್ದಿಸಿ ಕೊಲೆ ಮಾಡಿ ನಂತರ ಇದನ್ನು ಅಪಘಾತವೆಂಬಂತೆ ಬಿಂಬಿಸಿದ್ದರು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಮಂಜುನಾಥ್ ಸೇರಿ ಐವರನ್ನು ಬಂಧಿಸಿದ್ದರು ಎಂದು ಮೂಲಗಳು ಹೇಳಿವೆ.
ಆರೋಪಿ ಮಂಜುನಾಥ್ ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಕೂಡ ಆಗಿದ್ದು, ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.






