Bengaluru | ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಓರ್ವ ವಶಕ್ಕೆ

ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು, ಮೇ 10 : ಬೆಂಗಳೂರು ನಗರದ ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಾತಗುಣಿ ಬಳಿ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ರವಿವಾರ ವರದಿಯಾಗಿದೆ.
ಈ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ್ದ ಆರೋಪದಡಿ ಸುಮಾರು 40 ವರ್ಷ ವಯಸ್ಸಿನ ಕೋರಮಂಗಲ ನಿವಾಸಿಯೊಬ್ಬನನ್ನು ಕಗ್ಗಲೀಪುರ ಠಾಣಾ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮೇ 10ರಂದು ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಿಗದಿಯಾಗಿದ್ದ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಕಡೆ ತೆರಳುವ ಮಾರ್ಗದ ಸಮೀಪದಲ್ಲೇ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪ್ರಧಾನಿ ಆಗಮನಕ್ಕೂ ಮುನ್ನ ಕೋರಮಂಗಲ ಪೊಲೀಸರಿಗೆ ಕರೆ ಮಾಡಿದ್ದ ಆರೋಪಿ, ಎಚ್ಎಎಲ್ ಹಾಗೂ ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಕೂಡಲೇ ಆ ವ್ಯಕ್ತಿಯನ್ನು ಪತ್ತೆ ಮಾಡಿದ್ದ ಪೊಲೀಸರು, ಎರಡೂ ಕಡೆಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಎಚ್ಎಎಲ್ ಬಳಿ ಏನೂ ಪತ್ತೆಯಾಗಿಲ್ಲ. ಆದರೆ, ಕಗ್ಗಲೀಪುರದ ತಾತಗುಣಿ ಸಮೀಪದಲ್ಲಿ ರಸ್ತೆಯಿಂದ ಸುಮಾರು 40-50 ಮೀಟರ್ ದೂರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಕೂಡಲೇ ಆ್ಯಂಟಿ ಸಬೊಟೇಜ್ ಚೆಕ್(ಎಎಸ್ಸಿ) ತಂಡದ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ ಎಂದು ಕೇಂದ್ರ ವಲಯದ ಡಿಐಜಿ ಎಸ್.ಗಿರೀಶ್ ತಿಳಿಸಿದ್ದಾರೆ.
ಜಿಲೆಟಿನ್ ಕಡ್ಡಿಗಳನ್ನು ಇರಿಸಿದವರು ಯಾರು? ಕರೆ ಮಾಡಿದ್ದ ವ್ಯಕ್ತಿಯೇ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ್ದನಾ? ಎರಡಕ್ಕೂ ಸಂಬಂಧವಿದೆಯಾ ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಡಿಐಜಿ ಎಸ್.ಗಿರೀಶ್ ಹೇಳಿದ್ದಾರೆ.






