ಬ್ಯಾಂಕಾಕ್ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 47 ವನ್ಯಜೀವಿಗಳು ವಶ: ಏರ್ಪೋರ್ಟ್ನಲ್ಲಿ ಆರೋಪಿ ಸೆರೆ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಬ್ಯಾಂಕಾಕ್ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 47 ವನ್ಯಜೀವಿಗಳನ್ನು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಕೆಂಪು ಪಾದದ ಆಮೆಗಳು, ಆಫ್ರಿಕನ್ ಆಮೆಗಳು, ಅರ್ಜೆಂಟಿನಾ ಕಪ್ಪು-ಬಿಳಿ ತೇಗು, ಗೋಲ್ಡೀಸ್ ಮಾರ್ಮೋಸೆಟ್ ಸೇರಿದಂತೆ ವಿಭಿನ್ನ ಪ್ರಭೇದದ 47 ವನ್ಯ ಜೀವಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಮೂಲಗಳು ತಿಳಿಸಿವೆ.
3.26 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ:
ಮತ್ತೊಂದು ಪ್ರಕರಣದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸುಮಾರು 3.26 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರ ತಪಾಸಣೆ ವೇಳೆ ಲಗೇಜ್ನಲ್ಲಿ ಗಾಂಜಾ ಪತ್ತೆಯಾಗಿದೆ. ಓರ್ವ ಪ್ರಯಾಣಿಕನ ಬಳಿ ಎಂಟೂವರೆ ಕೆ.ಜಿ.ಯ ಸುಮಾರು 2.98 ಕೋಟಿ ರೂ. ಮೌಲ್ಯದ ಗಾಂಜಾ ಹಾಗೂ ಮತ್ತೊರ್ವ ಪ್ರಯಾಣಿಕನ ಬಳಿ 28 ಲಕ್ಷ ರೂ. ಮೌಲ್ಯದ 800 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.






