Bengaluru | ನಾಳೆಯಿಂದ(ಮೇ 16) ‘ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ’ಕ್ಕೆ ಚಾಲನೆ

ಬೆಂಗಳೂರು : ರಾಜ್ಯ ಸರಕಾರವು ಬೆಂಗಳೂರು ನಗರ ಭೂಮಾಲಕರ ಹಿತಕ್ಕಾಗಿ ಸರಕಾರದ ಆರನೇ ಗ್ಯಾರಂಟಿ ‘ಭೂ ಗ್ಯಾರಂಟಿ’ ಯೋಜನೆ ಘೋಷಿಸಿದ್ದು, ಈ ಯೋಜನೆಗೆ ಸಂಬಂಧಿಸಿ ‘ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ’ಕ್ಕೆ ಮೇ 16ರಂದು ಅಧಿಕೃತ ಚಾಲನೆ ದೊರೆಯಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟನೆ ಹೊರಡಿಸಿದ ಅವರು, ಪ್ರಾಧಿಕಾರದ ಐದು ನಗರ ಪಾಲಿಕೆಗಳ ಆಸ್ತಿ ಮಾಲಕರಿಗೆ ಭೂ ದಾಖಲೆಗಳನ್ನು ಸುರಕ್ಷತೆ, ವಂಚನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಮಾಡಲಾಗಿದೆ. ಅವುಗಳಿಗೆ ಇ-ಖಾತೆಗಳನ್ನು ಸಿದ್ಧಪಡಿಸಿ, ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗಾಗಿ ಮಾರ್ಗಸೂಚಿ ಬೆಲೆ ಶೇ.5ರ ಬದಲಿಗೆ ಶೇ.2ರಷ್ಟು ಮಾತ್ರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯು ಕೇವಲ 100 ದಿನಗಳು ಮಾತ್ರ ಇರಲಿದೆ. ಈ ಸಂಬಂಧ ಮೇ 16ರಿಂದ ಪ್ರತಿ ಶನಿವಾರ 52 ಸ್ಥಳಗಳಲ್ಲಿ ‘ನನ್ನ ಖಾತಾ ನನ್ನ ಹಕ್ಕು ಅಭಿಯಾನ’ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಪ್ರತಿ ಕೇಂದ್ರದಲ್ಲಿಯೂ ಸುಮಾರು 100 ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ಅಂತಹವರಿಗೆ ಟೋಕನ್ ನೀಡಿ ಮುಂದಿನ ವಾರ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು. ಪ್ರತಿ ಶನಿವಾರ ಸುಮಾರು 5000 ನಾಗರಿಕರಿಂದ ಸೇವೆ ಒದಗಿಸುವ ಗುರಿಯಿದೆ ಎಂದು ಅವರು ವಿವರಿಸಿದ್ದಾರೆ.
ಭೂ ಗ್ಯಾರಂಟಿ ಯೋಜನೆ ಅನುಷ್ಠಾನದ ಭಾಗವಾಗಿ ಪ್ರತಿ ಶನಿವಾರವೂ ‘ನನ್ನ ಖಾತಾ ನನ್ನ ಹಕ್ಕು ಅಭಿಯಾನ’ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ 2ನೇ ಮತ್ತು 4ನೇ ಶನಿವಾರದ ರಜಾದಿನಗಳಂದು ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಬದಲಿಯಾಗಿ ಕೆಲಸದ ದಿನಗಳಂದು ಪರ್ಯಾಯವಾಗಿ ಒಂದು ದಿನ ಹೆಚ್ಚುವರಿ ರಜೆಯನ್ನು ಪಡೆಯಬಹುದಾಗಿರುತ್ತದೆ ಎಂದು ಅವರು ಹೇಳಿದ್ದಾರೆ.






